ಚಿದಾನಂದ ಮಾಯಪ್ಪಾ ಪಡದಾಳೆ
ಅಂದು ಮೇ. 3, 1999. ಫರ್ಕೂನ್ ಎಂಬ ಹಳ್ಳಿಯ ತಶಿ ನಂಗ್ಯಾಲ್ ಎಂಬಾತ ಕುರಿಗಳನ್ನು ಮೇಯಿಸಲು ಹೊರಟಿದ್ದ. ಆಗ ಆತನ ಗಮನ ಟೋಲೋಲಿಂಗ್ ಬೆಟ್ಟದ ಕಡೆಗೆ ನೆಟ್ಟಿತು. ಆತ ಸೂಕ್ಷ್ಮವಾಗಿ ಗಮನಿಸಿದ ಅವರು ಗಾಢ ಬಣ್ಣದ ಬಟ್ಟೆ ಧರಿಸಿದ್ದರು. ಅವರು ತಮ್ಮ ಕೆಲಸದಲ್ಲಿ ನಿರತವಾಗಿದ್ದರು. ಈತನಿಗೆ ಸಂಶಯ ಉಂಟಾಗಿ ಆ ಪ್ರದೇಶದ ಸೈನ್ಯಾಧಿಕಾರಿಗೆ ವಿಷಯ ಮುಟ್ಟಿಸಿದ. ಸೈನ್ಯಾಧಿಕಾರಿಯು ತನ್ನ ಸೈನಿಕರಿಗೆ ಬೆಟ್ಟದ ಮೇಲಿರುವ ಬಂಕರ್‍ಗಳನ್ನು ಪರೀಕ್ಷಿಸಿ ಬರುವಂತೆ ಆದೇಶ ನೀಡುತ್ತಾರೆ. ಆರು ಜನರಿದ್ದ ಗುಂಪೊಂದು ಆ ಬೆಟ್ಟದ ಮೇಲೆ ಹೋಗಿ 22 ದಿನಗಳ ನಂತರ ವಾಪಸಾಗುತ್ತದೆ. ಆದರೆ ಜೀವಂತವಾಗಿ ಅಲ್ಲ. ಬದಲಾಗಿ ಗುರುತು ಹಿಡಿಯಲಾರದಂಥ ಶವಗಳಾಗಿ! ಆ ಶವಗಳು ಬೇರಾರೂ ಆಗಿರುವುದಿಲ್ಲ ಸ್ವತಃ ನಮ್ಮ ಭಾರತ ದೇಶದ ಸೈನಿಕರ ಶವಗಳವು! ಈ ಬರ್ಬರ ಕೃತ್ಯ ಎಸಗಿದವರು ಬೇರಾರೂ ಅಲ್ಲ ಕುರಿ ಕಾಯುವಾತ ಕಂಡಿದ್ದ ಗಾಢ ಬಣ್ಣದ ಬಟ್ಟೆ ಧರಿಸಿದವರು. ಆ ಬಟ್ಟೆ ಧರಿಸಿದವರು ಬೇರಾರೂ ಅಲ್ಲ, ಅಕ್ರಮವಾಗಿ ಭಾರತದ ಗಡಿಯನ್ನು ನುಸುಳಿ ಬಂದ ಪಾಕಿಸ್ತಾನಿ ಹೇಡಿ ಸೈನಿಕರು.! ಪಾಕಿಸ್ತಾನ ಮುನ್ಸೂಚನೆ ಇಲ್ಲದೆಯೇ ಭಾರತದ ಗಡಿಯನ್ನು ದಾಟಿ ಬಂದಿತ್ತಿಲ್ಲದೇ ನಮ್ಮ ಆರು ಜನ ಸೈನಿಕರನ್ನು ನಿರ್ದಾಕ್ಷಿಣ್ಯವಾಗಿ ಕೊಂದು ಹಾಕಿತ್ತು. ಈ ಕೃತ್ಯದ ಹಿಂದಿದ್ದಿವರು ಬೇರಾರೂ ಅಲ್ಲ, ಆಗಿನ ಪಾಕ್ ಪ್ರಧಾನಿ ನವಾಜ್ ಷರೀಫ್ ಮತ್ತು ಪಾಕ್ ಸೇನಾ ಮುಖ್ಯಸ್ಥ ಜನರ್ ಪರ್ವೇಜ್ ಮುಷರಫ್!
ಹಿನ್ನೆಲೆ:
1971ರಲ್ಲಿಯೇ ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ‘ಸಿಮ್ಲಾ’ ಒಪ್ಪಂದವಾಗಿತ್ತು. ಒಪ್ಪಂದದಂತೆ ಉಭಯ ದೇಶಗಳು ಸೌಹಾರ್ದತೆ, ಮಾನವೀಯತೆಯಿಂದ ತಮ್ಮ ನೆಲೆಗಳಲ್ಲಿಯೇ ಬಾಳಬೇಕು. ಗಡಿ ನಿಯಂತ್ರಣ ರೇಖೆ ಉಲ್ಲಂಘಿಸದಂತೆ ಎರಡೂ ದೇಶಗಳು ನೋಡಿಕೊಳ್ಳಬೇಕು ಎಂಬುವುದಾಗಿತ್ತು. ಇದಕ್ಕೆ ಪೂರಕ ಎನ್ನುವಂತೆ 1990ರ ಫೆಬ್ರುವರಿ ತಿಂಗಳಲ್ಲಿ ಅಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರು ಬಸ್ ಯಾತ್ರೆಯ ಮೂಲಕ ಪಾಕಿಸ್ತಾನಕ್ಕೆ ತೆರಳಿ ‘ಲಾಹೋರ್ ಘೋಷಣೆ’ಗೆ ಅಂಕಿತ ಹಾಕಿದ್ದರು. ಈ ಘೋಷಣೆಯ ಮುಖ್ಯ ಉದ್ದೇಶವೆಂದರೆ, ‘ಕಾಶ್ಮೀರದ ಬಿಕ್ಕಟ್ಟಿಗೆ ಶಾಂತಿಯುತವಾದ ದ್ವಿ-ಪಕ್ಷೀಯ ಪರಿಹಾರ ಹುಡುಕುವುದಾಗಿತ್ತು’. ಈ ಸಂದರ್ಭದಲ್ಲಿ ಷರೀಫರಿಗೆ ವಾಜಪೇಯಿಯವರು ಭಾರತಕ್ಕೆ ಬರುವಂತೆ ಆಹ್ವಾನವಿತ್ತಿದ್ದರು. ಆಗ ಭಾರತ-ಪಾಕಿಸ್ತಾನ ‘ಭಾಯಿ-ಭಾಯಿ’ ಎನ್ನುತ್ತಿದ್ದವರು, ವಾಜಪೇಯಿಯವರು ಭಾರತಕ್ಕೆ ವಾಪಸ್ಸಾಗುತ್ತಿದ್ದಂತೆಯೇ ಪಾಕಿಸ್ತಾನ ತನ್ನ ನರಿ ಬುದ್ಧಿಯನ್ನು ತೋರಿತ್ತು! ಪಾಕ್ ಸೈನಿಕರನ್ನು ಭಾರತದೊಳಗೆ ನುಸುಳುವಂತೆ ಸೂಚಿಸಿತ್ತಾದರೂ; ತಾವು ಈ ಕೃತ್ಯ ಮಾಡಿಲ್ಲ ಎಂದು ಬೊಗಳೆ ಬಿಟ್ಟಿತೇ ಹೊರತು ತನ್ನ ತಪ್ಪನ್ನು ಒಪ್ಪಿಕೊಳ್ಳಲಿಲ್ಲ. 1998ರ ಅಕ್ಟೋಬರ್‍ನಲ್ಲಿಯೇ ಅಧಿಕಾರ ಸ್ವೀಕರಿಸಿದ್ದ ಮುಷರಫ್ ತನ್ನ ಸೈನಿಕರಿಗೆ ಭಾರತದ ಬಗ್ಗೆ ವಿಷದ ಬೀಜವನ್ನು ಬಿತ್ತುವ ಕೆಲಸವನ್ನು ಮಾಡಿದ್ದ. 30-40 ಜನರ ತಂಡಗಳನ್ನು ರಚಿಸಿದ. ಇದರಲ್ಲಿ ಮುಜಾಹಿದ್ದೀನ್ ಕೂಡ ಇದ್ದರು ಎನ್ನುವುದು ಜಗಜ್ಜಾಹಿರು. ‘ಆಪರೇಷನ್ ಬದ್ರ್’ ಎಂಬ ತಂತ್ರ ರೂಪಿಸಿ ಕಾಶ್ಮೀರ ಕಣಿವೆಯಿಂದ ಲಡಾಖ್‍ನ್ನು ಬೇರ್ಪಡಿಸಿ, ಸಿಯಾಚಿನ್ ಗ್ಲೇಷಿಯರನ್ನು ವಶಪಡಿಸಿಕೊಳ್ಳುವುದು ಮುಷರಫ್ ಉದ್ದೇಶವಾಗಿತ್ತು. ಇದಕ್ಕಾಗಿ ಗಡಿ ನಿಯಂತ್ರಣ ರೇಖೆಯಿಂದ ಕಾರ್ಗಿಲ್‍ನ ಸುಮಾರು 160 ಕಿ.ಮೀ.ವರೆಗೆ ಪಾಕ್ ಸೈನಿಕರು ನುಗ್ಗಿ ಬಂದಿದ್ದರು. ಅಂದರೆ ‘ಸಿಮ್ಲಾ’ ಒಪ್ಪಂದಕ್ಕೆ ಹಾಗೂ ‘ಲಾಹೋರ್ ಘೋಷಣೆ’ಗೆ ಎಳ್ಳು ನೀರು ಹೊಯ್ದು ಕೈ ತೊಳೆದುಕೊಂಡು ತೋಳೆರಿಸಿ ಪಾಕ್, ಭಾರತದ ಮುಂದೆಯೇ ಎದೆಯುಬ್ಬಿಸಿ ನಿಂತಿತ್ತು. ಆದರೆ ಅದಕ್ಕೇನು ಗೊತ್ತು ಭಾರತದ ಶಕ್ತಿ?
ಪಾಕಿಸ್ತಾನ ಗಡಿಯೊಳಗೆ ನುಸುಳಿದೆ ಎಂದು ಗೊತ್ತಾದೊಡನೆ ವಾಜಪೇಯಿಯವರು ಜಾಗೃತರಾಗಿ 1999ರ ಜೂನ್ 7ರಂದು ದೇಶವನ್ನುದ್ದೇಶಿಸಿ ಮಾತನಾಡಿ, ‘ನಮ್ಮ ಸೈನ್ಯ ಹಾಗೂ ಸೈನಿಕರ ಮೇಲೆ ಸಂಪೂರ್ಣ ನಂಬಿಕೆಯಿದೆ. ಪಾಕ್ ಆಕ್ರಮಿಸಿಕೊಂಡ ಇಂಚಿಂಚು ನೆಲವನ್ನು ಕೂಡ ನಮ್ಮ ಯೋಧರು ವಾಪಸ್ ಪಡೆದುಕೊಳ್ಳುತಾರೆ. ಈ ಬಗ್ಗೆ ನನಗೆ ಸಂಪೂರ್ಣ ನಂಬಿಕೆಯಿದೆ’ ಎಂದರು. ಇಂತಹ ಮಾತುಗಳಿಂದ ಪ್ರೇರಿತರಾದ ನಮ್ಮ ವೀರ ಯೋಧರು ಯುದ್ಧಕ್ಕೆ ಸನ್ನದ್ಧರಾದರು. ವಾಜಪೇಯಿಯವರ ವಿಶ್ವಾಸದ ಮಾತುಗಳಿಂದ ಸೈನಿಕರ ಬಲ ನೂರ್ಮಡಿಗೊಂಡಿತು. ಯುದ್ಧ ಗೆಲ್ಲುವುದು ಖಚಿತ ಎಂಬ ಭಾವನೆ ಭಾರತೀಯರೆಲ್ಲರಲ್ಲೂ ಮನೆ ಮಾಡಿತು. ದೇಶದ ಪ್ರತಿಯೊಬ್ಬರ ಹೃದಯ ಗೆಲುವಿಗಾಗಿ ಪ್ರಾರ್ಥಿಸಿತು. ಆ ಪ್ರಾರ್ಥನೆಗೆ ವ್ಯರ್ಥವಾಗಲಿಲ್ಲ.
- Advertisement -
ಆಪರೇಷನ್ ವಿಜಯ್:
1999ರ ಮೇ 3ರಂದು ಕುರಿ ಕಾಯುವವ ನೀಡಿದ ಸುಳಿವಿನಂತೆ, ಮೇ ಎರಡನೇ ವಾರದಲ್ಲಿ ಕ್ಯಾಪ್ಟನ್ ಸೌರಭ್ ಕಾಲಿಯಾ ನೇತೃತ್ವದಲ್ಲಿ 5 ಜನರ ಸೇನಾ ತುಕಡಿಯನ್ನು ಬೆಟ್ಟದ ಮೇಲಿರುವ ಬಂಕರ್‍ಗಳನ್ನು ಪರೀಕ್ಷಿಸಿ ಬರುವಂತೆ ಆದೇಶ ನೀಡಲಾಗುತ್ತದೆ. ಆದರೆ ಅವರನ್ನು ಮೇ 15ರಂದು ಸೆರೆಹಿಡಿದು, ಚಿತ್ರಹಿಂಸೆ ನೀಡಿ, ಬರ್ಬರವಾಗಿ ಹತ್ಯೆಗೈದು 22 ದಿನಗಳ ನಂತರ ಅಂದರೆ ಜೂನ್ 7ಕ್ಕೆ ಭಾರತಕ್ಕೆ ಯೋಧರ ಶವಗಳನ್ನು ಗೋಣಿ ಚೀಲಗಳಲ್ಲಿ ಹಾಕಿ ಕಳುಹಿಸಿರುತ್ತಾರೆ ಪಾಪಿಗಳು! ಕಾರ್ಗಿಲ್ ಯುದ್ಧ ಆರಂಭವಾಗುವುದಕ್ಕೆ ಇದೂ ಒಂದು ಮುಖ್ಯ ಕಾರಣವಾಯ್ತು. ಇದರಿಂದ ಕ್ರುದ್ಧಗೊಂಡ ವಾಜಪೇಯಿಯವರು ಪಾಕ್ ವಿರುದ್ಧ ಯುದ್ಧ ಸಾರಿಯೇ ಬಿಟ್ಟರು. ಅನುಮತಿಯನ್ನೇ ಕಾಯುತ್ತಿದ್ದ ಬಾರತೀಯ ಸೈನಿಕರ ಸಹನೆ ಕಟ್ಟೆಯೊಡೆಯಿತು. ‘ಆಪರೇಷನ್ ವಿಜಯ್’ ಮೂಲಕ ಹುಲಿಗಳಂತೆ ಪಾಕ್ ಸೈನಿಕರ ಮೇಲೆ ನುಗ್ಗಿದರು. ಕಾರ್ಗಿಲ್-ಡ್ರಾಸ್ ವಲಯದಲ್ಲಿ ಸುಮಾರು 30,000ದಷ್ಟು ಸೈನಿಕರಿದ್ದರು. ಇದರಲ್ಲಿ 20,000 ಭೂ ಸೇನಾ ಪಡೆಯ ಯೋಧರು, 10,000 ವಾಯು ಸೇನೆ ಯೋಧರು ಹಾಗೂ ಅರೆಸೇನಾಪಡೆಯ ಯೋಧರೂ ಇದ್ದರು. ಅವರೆಲ್ಲರೂ ಹೋರಾಡಬೇಕಾದ ಪ್ರದೇಶ ಅತ್ಯಂತ ದುರ್ಗಮ ಪ್ರದೇಶವಾಗಿತ್ತು. -15 ಡಿಗ್ರಿಗಳಷ್ಟು ಮೈ ಹೆಪ್ಪುಗಟ್ಟುವಂತಹ ಛಳಿಯಿದ್ದರೂ ಸಹಿತ, ಸಮುದ್ರ ಮಟ್ಟಕ್ಕಿಂತ 16,000 ಅಡಿಗಳಷ್ಟು ಎತ್ತರದ ಯುದ್ದಭೂಮಿಯಲ್ಲಿ ಹೋರಾಡಿದರು. ಇದಕ್ಕೆ ವಾಯು ಸೇನೆಯು ‘ಆಪರೇಷನ್ ಸಫೇದ್ ಸಾಗರ್’ ಮೂಲಕ ಬೆಂಬಲ ನೀಡಿ ಸೈನಿಕರನ್ನು ಹುರಿದುಂಬಿಸಿತು.
ಟೋಲೋಲಿಂಗ್ ವಶ:
ಯುದ್ಧ ಪ್ರಾರಂಭವಾಗುವ ಹಂತದಲ್ಲೇ ಟೋಲೋಲಿಂಗ್ ಬೆಟ್ಟ ಪಾಕ್ ವಶವಾಗಿತ್ತು. ಈ ಬೆಟ್ಟ ಕಾರ್ಗಿಲ್‍ನಿಂದ 20 ಕಿ.ಮೀ. ಹಾಗೂ ಡ್ರಾಸ್‍ನಿಂದ 6 ಕಿ.ಮೀ ಅಂತರದಲ್ಲಿತ್ತು. ಆದರೆ ಈ ಬೆಟ್ಟವನ್ನು ವೈರಿ ಸೈನಿಕರಿಂದ ಬಿಡಿಸಿಕೊಳ್ಳುವುದು ಸಾಮಾನ್ಯ ವಿಷಯವಾಗಿರಲಿಲ್ಲ. ಅದಲ್ಲದೇ ಈ ಪ್ರದೇಶ ಸಮುದ್ರ ಮಟ್ಟದಿಂದ 16,000 ಅಡಿ ಎತ್ತರದಲ್ಲಿರುವ ಹುಲ್ಲು ಕಡ್ಡಿಯೂ ಬೆಳೆಯದ ಬರಡು ಭೂಮಿಯಾಗಿತ್ತು. ಆದಷ್ಟು ಬೇಗ ಈ ಪ್ರದೇಶ ನಮ್ಮ ವಶವಾಗಬೇಕಿತ್ತು, ಏಕೆಂದರೆ ಅದು ಲೇಹ್‍ನ ಓಊ-1 ರಾಷ್ಟ್ರೀಯ ಹೆದ್ದಾರಿಯ ಪ್ರದೇಶದಲ್ಲಿತ್ತು. ಟೋಲೋಲಿಂಗ್‍ಗೆ ಹೋಗಲು ಈ ದಾರಿಯೊಂದೆ ಸೂಕ್ತ ಹಾಗೂ ಏಕೈಕ ಮಾರ್ಗವಾಗಿತ್ತು. ಈ ದಾರಿಯಿಂದ ಯಾರೇ ಮುನ್ನುಗ್ಗಿದರೂ ಶವವಾಗಿ ಮರಳುತ್ತಿದ್ದರು. ಹಲವಾರು ಸೈನಿಕರ ಬಲಿದಾನದ ಬಳಿಕ ಈ ಬೆಟ್ಟ ನಮ್ಮ ಸೈನಿಕರ ವಶವಾಯಿತು. ಭೀಕರ ಹೋರಾಟದ ನಂತರ ರೈಫಲ್ಸ್ ಕಮಾಂಡರ್ ರವೀಂದ್ರನಾಥ್ ನೇತೃತ್ವದ ತಂಡ ಜೂನ್ 12ರಂದು ಟೋಲೋಲಿಂಗ್ ವಶಪಡಿಸಿಕೊಂಡು ಸಾಹಸ ಮೆರೆಯಿತು. ಆದರೆ ದುಃಖಮಯ ಸಂಗತಿಯೆಂದರೆ ಕಾರ್ಗಿಲ್‍ನಲ್ಲಿ ಪ್ರಾಣ ತೆತ್ತ ಅರ್ಧದಷ್ಟು ಸೈನಿಕರು ಇದೇ ಟೋಲೋಲಿಂಗ್‍ನಲ್ಲಿ ಹತರಾದರು.
ಟೋಲೋಲಿಂಗ್ ವಶದ ನಂತರ ಸೇನೆಗೆ ಮತ್ತಷ್ಟು ಹುರುಪು ಬಂದಿತು. ಈ ನಿಟ್ಟಿನಲ್ಲಿ ಕೇವಲ ಒಂದೇ ವಾರದಲ್ಲಿ ಪಾಯಿಂಟ್ 4590, 5140 ಗೆಲ್ಲುವುದರ ಮೂಲಕ ನಾಲ್ಕು ದಿಗ್ವಿಜಯಗಳನ್ನು ಭಾರತದ ಯೋಧರು ಸಾಧಿಸಿದರು. ಇದಕ್ಕಿಂತ ಮೊದಲು ಲೆಫ್ಟಿನೆಂಟ್ ಕೇಶಿಂಗ್ ಸೋನುಗ್ರಮ್‍ರ ನಾಯಕತ್ವದಲ್ಲಿ ಪಾಯಿಂಟ್ 4812ನ್ನು ವಶಪಡಿಸಿಕೊಳ್ಳಲು ಮುಂದಡಿಯಿಟ್ಟರು. ಅದರೆ ಅದು ಅಷ್ಟು ಸುಲಭದ ಮಾತಾಗಿರಲಿಲ್ಲ. ಪಾಕ್ ಸೈನಿಕರು ಭಾರೀ ತಯಾರಿಯೊಂದಿಗೆ ಇದ್ದರು. ಅದಕ್ಕಾಗಿ ಅಲ್ಲಿ ದಾಳಿ ಮಾಡುವ ಯಾವುದೇ ರೀತಿಯ ಉಪಾಯ ಹೊಳೆಯಲಿಲ್ಲ. ಸ್ವಲ್ಪ ಹೊತ್ತು ಕಾದ ಸೋನುಗ್ರಮ್ ಶತ್ರುಗಳಿಂದ ತೂರಿಬರುತ್ತಿರುವ ಗುಂಡುಗಳ ಮಧ್ಯೆಯೇ ಎದುರಾಗಿ ದಾಳಿ ಆರಂಭಿಸಿಯೇ ಬಿಟ್ಟರು. ವೈರಿ ಬಂಕರ್ ಮೇಲೆ ಗ್ರೇನೆಡ್ ಎಸೆದು ಛಿದ್ರವಾಗಿಸಿದರು. ಆದರೆ ದುರಾದೃಷ್ಟ…… ವೀರಯೋಧ ಸೋನುಗ್ರಮ್ ಶತ್ರುಗಳ ಗುಂಡುಗಳಿಗೆ ಎದೆಯೊಡ್ಡಿದ್ದರು! ಆದರೂ ಪಾಯಿಂಟ್ ವಶವಾಗುವವರೆಗೆ ಆತ ಮಾತ್ರ ಹೋರಾಡುತ್ತಲೇ ಇದ್ದ. ಪಾಯಿಂಟ್ ವಶವಾದ ನಂತರ ಆತ ಕೊನೆಯುಸಿರೆಳೆದ! ಎಂಥಾ ದೇಶಪ್ರೇಮವದು!
ಟೈಗರ್ ಹಿಲ್ ವಶ:
ಕಾರ್ಗಿಲ್‍ನ ಮತ್ತೊಂದು ದುರ್ಗಮ ಪ್ರದೇಶ ಈ ಟೈಗರ್ ಹಿಲ್. ಸುಮಾರು 15 ರಿಂದ 18 ಸಾವಿರ ಅಡಿ ಎತ್ತರದಲ್ಲಿರುವ ಈ ಬೆಟ್ಟವನ್ನು ಕಾಲ್ನಡಿಗೆಯಲ್ಲಿಯೇ ಹತ್ತಬೇಕು. ಇದನ್ನು ಏರಲು ಯೋಧನಿಗೆ ಸುಮಾರು 11 ಗಂಟೆಗಳಾದರೂ ಬೇಕು. ಏರಿ ಹೋಗುವಾಗ ಶತ್ರುಗಳು ದಾಳಿ ಮಾಡುವ ಸಂಭವವು ಇತ್ತು. ಆದರೆ ಧೃತಿಗೆಡದ ಸೈನಿಕರು ಹೋರಾಟ ನಡೆಸಿದ ಫಲವಾಗಿ ಟೈಗರ್ ಹಿಲ್ ಜುಲೈ 5 ರಂದು ಭಾರತದ ವಶವಾಗಿತ್ತು. ಈ ಸಮಯಕ್ಕೆ ಪಾಕ್ ಯುದ್ಧ ಸಾಕು ಎನ್ನುವಷ್ಟರ ಮಟ್ಟಿಗೆ ಬಳಲಿತ್ತು. ಭಾರತೀಯರ ಆರ್ಭಟಕ್ಕೆ ಬೆದರಿದ ಷರೀಫ್‍ನ ನೀರಿಳಿದಿತ್ತು. ಯುದ್ಧವನ್ನು ನಿಲ್ಲಿಸುವಂತೆ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್‍ರಿಗೆ 1999ರ ಜುಲೈ 4ರಂದು ಭೇಟಿಯಾಗಿ ಕಾಲಿಗೆ ಬೀಳುವುದು ಒಂದೇ ಬಾಕಿ, ಭಾರತಕ್ಕೆ ಯುದ್ಧವನ್ನು ನಿಲ್ಲಿಸುವಂತೆ ಕ್ಲಿಂಟನ್‍ರಿಗೆ ಹೇಳಿದಾಗ ಕ್ಯಾರೇ ಎನ್ನದ ಅವರು ನಿಮ್ಮ ಸೈನಿಕರನ್ನು ಮೊದಲು ಹಿಂದೆ ಕರೆಸಿಕೊಳ್ಳಿ ಎಂದು ಉಗಿದು ಕಳಿಸಿದರು. ಆದರೆ ಷರೀಫ್ ಏನೂ ಮಾಡುವಂತಿರಲಿಲ್ಲ. ಏಕೆಂದರೆ ಸೈನ್ಯದ ಲಗಾಮು ಮುಷರಫ್ ಕೈಯಲ್ಲಿತ್ತು! ಆಗ ಷರೀಫ್ ಪರಿಸ್ಥಿತಿ ‘ಅಂಡ ಸುಟ್ಟ ಬೆಕ್ಕಿನ ಹಾಗಾಗಿತ್ತು!
ಈಗ ಪಾಕ್ ಸೈನ್ಯವನ್ನು ಹಿಂದೆ ಕರೆಸಿಕೊಳ್ಳಬೇಕೆನಿಸುವಷ್ಟರಲ್ಲಿ ಶೇ.80% ಭಾಗವನ್ನು ಭಾರತ ಅದಾಗಲೇ ವಶಪಡಿಸಿಕೊಂಡಿತ್ತು. ಕೊನೆಯ ಭಾಗವಾದ ಡ್ರಾಸ್ ಪ್ರದೇಶವನ್ನು ಗೆದ್ದು, ಪಾಕ್ ಸೈನ್ಯವನ್ನು ಯಶಸ್ವಿಯಾಗಿ ಬಗ್ಗು ಬಡಿದು ಜುಲೈ 26ರಂದು ಗೆಲುವಿನ ಕೇಕೆ ಹಾಕಿತ್ತು ನಮ್ಮ ಭಾರತ! ಆದರೆ 527 ವೀರಯೋಧರನ್ನು ನಾವು ಕಳೆದುಕೊಂಡೆವು. 1363 ಸೈನಿಕರು ಕಣ್ಣು, ಕೈ, ಕಾಲುಗಳನ್ನು ಕಳೆದುಕೊಂಡು ಅಂಗವಿಕಲರಾದರು. ಪಾಕ್ ಸೈನ್ಯದಲ್ಲಿನ 696 ಸೈನಿಕರನ್ನು ಭಾರತೀಯರು ಸೈನಿಕರು ಹೊಸಕಿ ಹಾಕಿದ್ದರು. ಯುದ್ಧಾನಂತರ ತನ್ನ ದೇಶದ ಸೈನಿಕರ ಶವ ಒಯ್ಯಲು ಸ್ವತಃ ಪಾಕಿಸ್ತಾನ ಬರಲಿಲ್ಲ. ಕ್ಯಾ. ಸೌರಭ್ ಕಾಲಿಯಾ, ಕ್ಯಾ ವಿಕ್ರಮ್ ಬಾತ್ರಾ, ಲೆ. ಮನೋಜ್‍ಕುಮಾರ್ ಪಾಂಡೆ, ಸಿಪಾಯಿ ಅಮರದೀಪ ಸಿಂಗ್, ಸ್ಕ್ವಾಡ್ರನ್ ಲೀಡರ್ ಅಜಯ್ ಅಹುಜಾ, ಗ್ರೆನೇಡಿಯರ್ ಯೋಗೇಂದ್ರ ಸಿಂಗ್, ರೈಫಲ್ ಮ್ಯಾನ್ ಸಂಜಯ್‍ಕುಮಾರ್, ಲೆ. ಕಣಾದ್ ಭಟ್ಟಾಚಾರ್ಯ, ಕ್ಯಾ. ಸಜುಚೇರಿಯನ್, ಲೆ. ನಂಗ್ರಮ್, ಕ್ಯಾ. ಜೆರ್ರಿ ಪ್ರೇಮ್ ರಾಜ್, ಮೇಜರ್ ಸೋನಮ್ ವಾಂಗತ್ ಚುಕ್, ಕ್ಯಾ. ವಿಜಯ್ ಥಾಪರ್, ವೈ.ಕೆ.ಜೋಷಿ, ಅನೂಜ್ ನಯ್ಯರ್ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಅದೆಷ್ಟೋ ವೀರಪುತ್ರರು ನಮಗೆ ದೊರೆಯುತ್ತಾರೆ. ಪ್ರತಿಯೊಬ್ಬರೂ ಶೌರ್ಯ, ಸಾಹಸದ ಅವತಾರ ಮೂರ್ತಿಗಳು. ಸತ್ತ ಪಾಕ್ ಯೋಧರನ್ನು ನಮ್ಮ ಭಾರತೀಯ ಯೋಧರೇ ಅಂತಿಮ ಸಂಸ್ಕಾರ ಮಾಡಿ ಮಾನವೀಯತೆ ಮರೆದರು.
ಎಲ್ಲರಿಗೂ ಕಾರ್ಗಿಲ್ ವಿಜಯೋತ್ಸವದ ಶುಭಾಷಯಗಳು
ಭಾರತ್ ಮಾತಾ ಕೀ ಜೈ

