ಅತಿವೃಷ್ಟಿ-ಪ್ರವಾಹ ಎದುರಿಸಲು ಸರ್ವ ರೀತಿಯಿಂದ ಅಧಿಕಾರಿಗಳು ಸನ್ನದ್ಧಗೊಳ್ಳಿ; ಜಿಲ್ಲಾಧಿಕಾರಿ ಡಾ.ಸುಶೀಲ ಬಿ.
ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟು ಹೋಗಬಾರದು
ಸತ್ಯಕಾಮ ವಾರ್ತೆ ಯಾದಗಿರಿ :
ಜಿಲ್ಲೆಯಲ್ಲಿ ನಿರಂತರ ಆಗುತ್ತಿರುವ ಮಳೆಯ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಕೃಷ್ಣ ಹಾಗೂ ಭೀಮಾ ನದಿಗಳಿಗೆ ಬರಬಹುದಾದ ಪ್ರವಾಹ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಸಾರ್ವಜನಿಕರು, ನದಿ ಪಾತ್ರದ ಜನರು ಹಾಗೂ ಜಾನುವಾರುಗಳಿಗೆ ತೊಂದರೆ ಯಾಗದಂತೆ ಅವಶ್ಯಕ ಕ್ರಮಗಳನ್ನು ಈಗಿನಿಂದಲೇ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
- Advertisement -
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ಸಮಿತಿ ಸಭೆ ನಡೆಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಆಲಮಟ್ಟಿ, ನಾರಾಯಣಪುರ ಜಲಾಶಯಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ, ಹೊರ ಹರಿವು ಹೆಚ್ಚು ಆದ ಸಂದರ್ಭದಲ್ಲಿ ತುರ್ತಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಂಬಂಧಿಸಿದ ಇತರೆ ಅಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟು ಹೋಗದಂತೆ ಅವರು ಸೂಚನೆ ನೀಡಿದರು.
ಕೃಷ್ಣ ಮತ್ತು ಭೀಮಾ ನದಿ ತೀರಗಳ ವ್ಯಾಪ್ತಿಯಲ್ಲಿ ಅವಶ್ಯಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸಂಬಂಧ ಪಟ್ಟ ಅಧಿಕಾರಿಗಳು ಈಗಿನಿಂದಲೇ ಸನ್ನದ್ದರಾಗುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸದ್ಯ ಯಾವುದೇ ರೀತಿಯ ಪ್ರವಾಹದ ಭೀತಿ ಇಲ್ಲದಿದ್ದರೂ ಕೂಡ, ಮಳೆ ಪ್ರಮಾಣ ಹೆಚ್ವಾಗಿ ಕೃಷ್ಣ ಮತ್ತು ಭೀಮಾ ನದಿ ನೀರು ಹೆಚ್ಚಾಗುವ ಸಾಧ್ಯತೆ ಇರುತ್ತದೆ.
- Advertisement -
ಈ ಹಿಂದಿನ ವರ್ಷಗಳಲ್ಲಿ ಪ್ರವಾಹ ಸಂದರ್ಭಗಳಲ್ಲಿ ಬಾಧಿತವಾಗಿದ್ದ ಗ್ರಾಮಗಳ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕರ್ತವ್ಯಗಳೊಂದಿಗೆ ನಿಭಾಯಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಖುದ್ದಾಗಿ ನಿಗಾ ಇಟ್ಟು ಅವಶ್ಯಕ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.
- Advertisement -
ಜಿಲ್ಲೆಯ ಆಯಾ ತಹಸೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು, ಅಭಿಯಂತರರು, ಆರ್.ಡಿ.ಪಿ.ಆರ್ ಇಲಾಖೆ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧ ಪಟ್ಟ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಅತಿವೃಷ್ಟಿ, ಹಾಗೂ ಪ್ರವಾಹ ದಿಂದ ಯಾವುದೇ ಮಾನವ ಜೀವ ಹಾನಿ ಹಾಗೂ ಜಾನುವಾರುಗಳ ಜೀವ ಹಾನಿ ಆಗದಂತೆ ಮುಂಜಾಗ್ರತೆವಹಿಸಬೇಕು. ಪ್ರತಿ ಹೋಬಳಿವಾರು ನೇಮಿಸಿದ ನೋಡಲ್ ಅಧಿಕಾರಿಗಳು ಕೂಡ ಕೃಷ್ಣ ಮತ್ತು ಭೀಮಾ ನದಿ ಪಾತ್ರದ ವ್ಯಾಪ್ತಿಯಲ್ಲಿ ಸೂಕ್ತ ನಿಗಾ ವಹಿಸಬೇಕು . ನಾರಾಯಣಪುರ ಹಾಗೂ ಸನ್ನತಿ, ಗುರಸಣಗಿ ಬ್ರಿಡ್ಜ್ ಕಂ ಬ್ಯಾರೇಜ್‌ಗಳ ನೀರು ನಿರ್ವಹಣೆ ಹಾಗೂ ನಿಗಾಕ್ಕೆ ನೇಮಿಸಿರುವ ನೋಡಲ್ ಅಧಿಕಾರಿಗಳು ಸೂಕ್ತ ಗಮನ ನೀಡುವಂತೆ ಅವರು ಸೂಚನೆ ನೀಡಿದರು.
ಆಯಾ ತಹಸೀಲ್ದಾರರು, ನಗರಸ್ಥಳಿಯ ಸಂಸ್ಥೆಗಳ ಮುಖ್ಯಾಧಿಕಾರಿಗಳು , ತಾಲೂಕ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳ ವ್ಯಾಪ್ತಿಯಲ್ಲಿ ಒಳ ಚರಂಡಿ ಗಳನ್ನು ಸ್ವಚ್ಛಗೊಳಿಸಬೇಕು, ನೀರು ಸರಾಗವಾಗಿ ಹರಿದುಹೋಗುವಂತೆ ಚರಂಡಿಗಳ ತ್ಯಾಜ್ಯ ಬೇರೆ ಕಡೆ ಸ್ಥಳಾಂತರಿಸಲು ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ತಗ್ಗು ಪ್ರದೇಶಗಳಲ್ಲಿ ಓವರ್ ಫ್ಲೊವ್ ಆಗುವಂತಹ ಸೇತುವೆಗಳ ಹಾಗೂ ಸಿಡಿ ಗಳ ಬಗ್ಗೆ ಮಾಹಿತಿ ಕಲೆ ಹಾಕಿ ವರದಿ ಸಲ್ಲಿಸುವಂತೆ ಅವರು ಸೂಚನೆ ನೀಡಿದರು.
ಅಗ್ನಿಶಾಮಕ ಇಲಾಖೆ ವ್ಯಾಪ್ತಿಯ ಎಲ್ಲ ಬೋಟ್‌ಗಳನ್ನು, ಸಾಧನ ಸಲಕರಣೆಗಳನ್ನು, ವಾಹನಗಳನ್ನು ಸುಸ್ಥಿಯಲ್ಲಿ ಇಟ್ಟುಕೊಳ್ಳಬೇಕು. ಜೆಸ್ಕಾಮ್ ಅಧಿಕಾರಿಗಳು ತುರ್ತು ಸಂದರ್ಭಗಳಲ್ಲಿ ಖುದ್ದಾಗಿ ಭೇಟಿ ನೀಡಿ ಸಾರ್ವಜನಿಕರಿಗೆ ತಕ್ಷಣ ಸ್ಪಂದಿಸಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಪಿಡಿಓ ಗಳು ಮುನ್ನೆಚ್ಚರಿಕೆ ಯಾಗಿ ಆಯಾ ಗ್ರಾಮ ಲೆಕ್ಕಿಗರು, ಗ್ರಾಮ ಸಹಾಯಕರ ಮೂಲಕ ಡಂಗುರಾ ಮೂಲಕ ಅರಿವಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು.
ವಿವಿಧ ಆಸ್ಪತ್ರೆಗಳಲ್ಲಿ ಔಷಧಿ ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಬೇಕು. ಸಾಂಕ್ರಾಮಿಕ ರೋಗ ಹರಡದಂತೆ ಅವಶ್ಯಕ ಕ್ರಮ ಕೈಗೊಳ್ಳವ ಬಗ್ಗೆ ಸಿದ್ಧತೆಯಲ್ಲಿರಬೇಕು. ಪ್ರವಾಹದ ವೇಳೆ ಕುಡಿಯುವ ನೀರಿಗೆ ಕಲುಷಿತ ನೀರು ಸೇರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಪ್ರವಾಹದ ಸಂದರ್ಭದಗಳಲ್ಲಿ ಜಾನುವಾರುಗಳ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಬಗ್ಗೆ ಸೂಕ್ತ ಪ್ರದೇಶ ಗಳನ್ನು, ತಾತ್ಕಾಲಿಕ ಶೆಡ್‌ಗಳನ್ನು ಗುರುತಿಸಿ ಇಟ್ಟು ಕೊಳ್ಳುವಂತೆ ಅವರು ಸೂಚನೆ ನೀಡಿದರು.
ಅದರಂತೆ ಇತ್ತೀಚಿಗೆ ಸುರಿದ ಮಳೆ ಯಿಂದಾದ ಮನೆಹಾನಿ ಮತ್ತು ಇತರೆ ಹಾನಿಗಳ ಬಗ್ಗೆ ಜಂಟಿ ತಪಾಸಣೆ ನಡೆಸಿ ಸೂಕ್ತ ವರದಿ ಸಲ್ಲಿಸಬೇಕು . ವಿಶೇಷವಾಗಿ ಅತಿವೃಷ್ಟಿ ಮತ್ತು ಪ್ರವಾಹ ಗಳಿಂದ ಮುಂದೆ ಆಗಬಹುದಾದ ಹಾನಿಗಳ ಬಗ್ಗೆ ವಾಸ್ತವ ವರದಿ ಸಲ್ಲಿಕೆಗೆ ಸಂಬಂಧಿಸಿದ ಇಲಾಖೆ ಗಳ ಅಭಿಯಂತರರು ವಾಸ್ತವಾಂಶ ವರದಿ ಸಲ್ಲಿಸಲು ಸೂಚಿಸಿದ ಅವರು, ಭೀಮಾ ಮತ್ತು ಕೃಷ್ಣ ನದಿ ತೀರಗಳಲ್ಲಿ ಬಾಧಿತವಾಗುವ ಗ್ರಾಮಗಳ ಬಗ್ಗೆ, ಮೂಲ ಸೌಕರ್ಯ ಕಲ್ಪಿಸುವ ಬಗ್ಗೆ, ಸಂಭವಿಸಬಹುದಾದ ಮಾನವ ಜೀವಹಾನಿ ಹಾಗೂ ಜಾನುವಾರು ಜೀವಹಾನಿ ತಡೆಯುವ ಬಗ್ಗೆ ಅಧಿಕಾರಿಗಳು ಸೂಕ್ತ ನಿಗಾ ಇಡಬೇಕು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಸಹಾಯಕ ಆಯುಕ್ತರು ಹಂಪಣ್ಣ ಸಜ್ಜನ, ಡಿವೈಎಸ್‌ಪಿ ಅರುಣಕುಮಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವೀರನಗೌಡ, ವಿದ್ಯುತ್ ಜೆಸ್ಕಾಂ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ, ಸಹಾಯಕ ಇಲಾಖೆ ಉಪನಿರ್ದೇಶಕ ಪವನ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಎಲ್ಲಾ ತಾಲ್ಲೂಕು ತಹಸೀಲ್ದಾರರು ಉಪಸ್ಥಿತರಿದ್ದರು.

