ಸತ್ಯಕಾಮ ವಾರ್ತೆ ಯಾದಗಿರಿ:
ದೇಶದ ಸ್ವಾತಂತ್ರ್ಯ, ಐಕ್ಯತೆಗೆ ಪ್ರತೀಕವಾಗಿರುವ ಭಾರತ ಸೇವಾದಳವನ್ನು ಪ್ರತಿ ಶಾಲೆಯಲ್ಲಿ ಸಂಘಟಿಸಿ, ಶಿಕ್ಷಕರು ಮಕ್ಕಳಲ್ಲಿ ಸೇವಾ ಮನೋಭಾವ ಬೆಳೆಸಬೇಕು. ಮಾನವೀಯ ಮೌಲ್ಯಗಳ ಮಹತ್ವ ತಿಳಿಸಬೇಕು ಎಂದು ಭಾರತ ಸೇವಾದಳದ ಜಿಲ್ಲಾ ಅಧ್ಯಕ್ಷರಾದ ಮಲ್ಲಿಕಾರ್ಜುನರೆಡ್ಡಿ ಕೌಳೂರು ಹೇಳಿದರು.
ನಗರದ ಹೊರವಯದಲ್ಲಿರುವ ಸರಕಾರಿ ಆದರ್ಶ ವಿದ್ಯಾಲಯದಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ ಯಾದಗಿರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಯಾದಗಿರಿರವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕ/ ಶಿಕ್ಷಕಿಯರಿಗೆ ಒಂದು ವಾರದ ಜಿಲ್ಲಾ ಜಿಲ್ಲಾಮಟ್ಟದ ಸಹಾಯಕ ಶಿಕ್ಷಣ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಡಾ.ನಾ.ಸು.ಹರ್ಡಿಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕರಿಗೆ ಅಗತ್ಯ ತರಬೇತಿ ನೀಡುವುದಕ್ಕಾಗಿ ಈ ಕಾರ್ಯಾಗಾರ ಏರ್ಪಡಿಸಲಾಗಿದೆ. ಇಲ್ಲಿ ತಾವು ಪಡೆದ ತರಬೇತಿ ಮಕ್ಕಳಿಗೆ ವರ್ಗಾವಣೆ ಆಗುವಂತೆ ನೋಡಿಕೊಂಡಾಗ ಮಾತ್ರ ಅದಕ್ಕೊಂದು ಬೆಲೆ ಸಿಗುತ್ತದೆ ಎಂದರು.
ಉಪನಿರ್ದೇಶಕ ಕಾರ್ಯಾಲಯದ ವಿಷಯ ಪರಿವೀಕ್ಷಕರಾದ ಎಚ್ ಹಣಮಂತನವರು ಮಾತನಾಡಿ ಕರ್ನಾಟಕ ಗಾಂಧಿ ಹೆಸರಿನಿಂದ ಖ್ಯಾತಿ ಪಡೆದಿರುವ ನಾ.ಸು.ಹರ್ಡೀಕರ್ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಶಿಸ್ತು, ಧೈರ್ಯ ಹಾಗೂ ತ್ಯಾಗ ಮನೋಭಾವನೆಯನ್ನು ಹಿಂದೂಸ್ತಾನಿ ಸೇವಾದಳದ ಮೂಲಕ ಪರಿಚಯಿಸಿ ಸ್ವಾತಂತ್ರ್ಯ ಸಂಗ್ರಾಮವನ್ನು ಚುರುಕುಗೊಳಿಸಿದ ಮಹನೀಯರಲ್ಲಿ ಪ್ರಮುಖರು, ಅವರ ಸ್ಥಾಪಿತದ ಸೇವಾದಳ ಸೇವೆಯಲ್ಲಿ ಸಾರ್ಥಕತೆ ಕಂಡುಕೊಳ್ಳುವ ಸಂಸ್ಥೆಯಾಗಿದ್ದು. ಎಲ್ಲಾ ಕಾಲದಲ್ಲೂ ಈ ಸಂಸ್ಥೆ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಮಾಜದ ಗೌರವಕ್ಕೆ ಪಾತ್ರವಾಗಿದೆ. ಮಕ್ಕಳಲ್ಲಿ ಸೇವಾದಳದ ಕುರಿತು ಅರಿವು ಮೂಡಿ ಬರಬೇಕು. ಶ್ರದ್ಧೆ, ಸಂಯಮ, ದೇಶಾಭಿಮಾನ ಹಾಗೂ ನಾಗರಿಕ ಪ್ರಜ್ಞೆಯನ್ನು ಸೇವಾದಳದ ಚಟುವಟಿಕೆಗಳಿಂದ ಬೆಳೆಯುತ್ತದೆ. ಶಿಕ್ಷಕರು ತಮ್ಮ ಕರ್ತವ್ಯದ ಜತೆ ಸೇವಾದಳದ ಚಟುವಟಿಕೆಗಳನ್ನು ರೂಢಿಸಿಕೊಂಡು ಮಕ್ಕಳಲ್ಲಿ ದೇಶಾಭಿಮಾನ ಬಿತ್ತಿ ಉತ್ತಮ ಪ್ರಜೆಗಳನ್ನಾಗಿ ನಿರ್ಮಿಸಬೇಕು, ಅಲ್ಲದೆ ಈ ಸೇವಾದಳ ರಾಷ್ಟ್ರಧ್ವಜದ ಕುರಿತು ಗೌರವ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.
- Advertisement -
ಸೇವಾದಳದ ವಿಶೇಷ ಆರು ದಿನಗಳ ಶಿಬಿರವನ್ನು ಕುರಿತು ಶಿಕ್ಷಕಿ ಆರ್.ಪಿ ಶರಣಮ್ಮ ಮಾತನಾಡಿ ಶಿಸ್ತು, ಸಮಯ ಪ್ರಜ್ಞೆ, ಉತ್ತಮ ನಡವಳಿಕೆ ಹೊಂದುವುದನ್ನು ಈ ಶಿಬಿರದಲ್ಲಿ ಕಲಿತ್ತಿದ್ದೇವೆ, ತರಬೇತಿಯು ಅತ್ಯುತ್ತಮವಾಗಿ ಮೂಡಿ ಬಂದಿದ್ದು ನಮ್ಮ ಶಾಲಾ ಮಕ್ಕಳಿಗೆ ಅನುಕೂಲಕರವಾಗಿರುವ ಹಲವು ವಿಚಾರಗಳನ್ನು ತಿಳಿದುಕೊಂಡಿದ್ದೇವೆ, ಅದನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುವ ಮೂಲಕ ಉತ್ತಮ ಸಮಾಜದ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಮುಂದಾಗುತ್ತೇವೆ ಎಂದರು.
ನಂತರ ಶಿಕ್ಷಕಿ ಭೀಮವ್ವ ಮಾತನಾಡಿ ಸಾಮಾನ್ಯವಾಗಿ ನಾವೆಲ್ಲ ನಮ್ಮ ಶಾಲೆಗಳಲ್ಲಿ ಒಂದು ವಿಷಯಕ್ಕೆ ಸೀಮಿತವಾಗಿರುವ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತೇವೆ. ಆದರೆ ನಾವು ಎಲ್ಲಾ ವಿಷಯಗಳಲ್ಲೂ ಆಸಕ್ತಿಯುಳ್ಳ ವ್ಯಕ್ತಿತ್ವ ಹೊಂದಿರಬೇಕು ಹಾಗೂ ನೃತ್ಯ ಹಾಡುಗಾರಿಕೆ ಬರವಣಿಗೆ ಎಲ್ಲಾ ವಿಷಯಗಳನ್ನು ಬೋಧಿಸುವ ಅಭ್ಯಾಸ ಮಾಡಿಕೊಳ್ಳಬೇಕಿದೆ ಎಂಬುದು ಈ ಶಿಬಿರದಿಂದ ನನಗೆ ಅರ್ಥವಾಗಿದೆ. ಹಿರಿಯ ಶಿಬಿರರ್ಥಿಗಳ ಮಾರ್ಗದರ್ಶನದಿಂದ ಹಲವು ವಿಚಾರಗಳನ್ನು ಕಲಿತಿದ್ದೇವೆ ಎಂದರು ಹಾಗೂ ಇದೇ ಸಂದರ್ಭದಲ್ಲಿ ಶಿಬಿರಾವಧಿಯಲ್ಲಿ ತಮಗೆ ಹಿರಿಯ ತರಬೇತಿದಾರರು ನೀಡಿದ ಸಹಕರವನ್ನು ನೆನೆದರು.
ಊಟದ ರೊಟ್ಟಿ ಬುತ್ತಿ ಅಳಸಬಹುದು ಆದರೆ ಜ್ಞಾನದ ಬಂಡಾರ ಎಂದಿಗೂ ಅಳಸುವುದಿಲ್ಲ ಎಂದು ಶಿಕ್ಷಕಿಯೊಬ್ಬರು ಅಭಿಪ್ರಾಯಪಟ್ಟರು.
ಬಳಿಕ ಆರು ದಿನಗಳ ಶಿಬಿರದಲ್ಲಿ ಭಾಗವಹಿಸಿದ ಶಿಕ್ಷಕ/ ಶಿಕ್ಷಕಿಯರಿಗೆ, ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡುವ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.
ಬಸವಂತಪುರ ಶಾಲೆಯ ದೈಹಿಕ ಶಿಕ್ಷಕರಾದ ತುಳಜಾರವರು ನಿರೂಪಿಸಿದರು. ದೈಹಿಕ ಶಿಕ್ಷಕರಾದ ಜೋಗಪ್ಪನವರ ಸ್ವಾಗತಿಸಿದರು, ಭಾ. ಸೇ. ದಳದ ಜಿಲ್ಲಾ ಸಂಘಟೀಕರಾದ ಸೈಯದ್ ಕಮರುದ್ದೀನ್, ವಂದಿಸಿದರು.
- Advertisement -
ಈ ಸಂದರ್ಭದಲ್ಲಿ ಭಾ. ಸೇ. ದಳದ ರಾಜ್ಯ ಉಪಾಧ್ಯಕ್ಷರಾದ ಚೆನ್ನಾರೆಡ್ಡಿ ಗೌಡ ಬಿಲಾರ್, ಪ್ರಭಾರಿ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿಗಳಾದ ಅನೀಲ ಕುಮಾರ, ಸರ್ಕಾರಿ ಆದರ್ಶ ವಿದ್ಯಾಲಯದದ ಮುಖ್ಯಗುರುಗಳಾದ ಶಂಕರಮ್ಮ, ನಿ. ದೈಹಿಕ ಶಿಕ್ಷಕರು ಹಾಗೂ ಭಾರತ ಸೇವಾದಳದ ನಿವೃತ್ತ ತಾಲೂಕು ಸಂಘಟಿಕರಾದ ಮಲ್ಲಿಕಾರ್ಜುನ ಬಳೆ, ಭಾ.ಸೇ.ದಳದ ಕಲ್ಬುರ್ಗಿ ಜಿಲ್ಲಾ ಸಂಘಟಿಕರಾದ ಚಂದ್ರಶೇಖರ್ ಜಮಾದಾರ್, ಚಿತ್ತಾಪುರ ತಾಲೂಕಿನ ನಿವೃತ್ತ ಸಂಘಟಿಕರಾದ ಸೈಯದ್ ಮೈಚೋದ್ದೀನ್, ಪತ್ರಕರ್ತ ಕುದಾನ್ ಸಾಬ್, ಅಜೀವ ಸದಸ್ಯರಾದ ಉಪನ್ಯಾಸಕ ಎಲ್. ಎನ್ ರೆಡ್ಡಿ, ವಿರೂಪಕ್ಷಯ್ಯ ದಂಡಗಿಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

