ಶಿಥಿಲಗೊಂಡ ಕಂಬ ದುರಸ್ತಿ ಕಾರ್ಯಕ್ಕೆ ಮುಂದಾಗದೆ ಕ್ಯಾರೇ ಎನ್ನದ ಅಧಿಕಾರಿಗಳು
*ಸತ್ಯಕಾಮ ವಾರ್ತೆ ಯಾದಗಿರಿ:*
ಮಕ್ಕಳ ಕಲಿಕೆಯ ಮೊದಲ ಹಂತವಾಗಿರುವ ಅಂಗನವಾಡಿ ಆವರಣದಲ್ಲಿನ ವಿದ್ಯುತ್ ಟ್ರಾನ್ಸ್‌ಫಾರ್ಮ್‌ರ್ ಕಂಬ ಬಿರುಕು ಬಿಟ್ಟು, ಈಗಲೋ ಆಗಲೋ ಬಿಳುವ ಹಂತದಲ್ಲಿದ್ದೂ, ಅಂಗನವಾಡಿ ಮಕ್ಕಳ ಜೀವ ರಕ್ಷಣೆಗೆ ಬೆಲೆ ಇಲ್ಲದಂತಾಗಿದೆ.
ಹೌದು ಯಾದಗಿರಿ ಪಟ್ಟಣದ ಹತ್ತಿಕುಣಿ-ಸೇಡಂ ರಸ್ತೆ ಸಮೀಪದ ಹಳೆ ಜಾಕ್ವಾಲ್ ಮುಸ್ಲಿಂಪೂರದಲ್ಲಿರುವ ಅಂಗನವಾಡಿ ಕೇಂದ್ರ-2ರಲ್ಲಿನ ಆವರಣದಲ್ಲಿ ಬಿರುಕು ಬಿಟ್ಟ ವಿದ್ಯುತ್ ಟ್ರಾನ್ಸ್‌ಫಾರ್ಮ್‌ರ್ ಕಂಬ ಕಾಣಬಹುದು, ಅಲ್ಲದೆ ಕಂಬದ ಸುತ್ತಲೂ ತಂತಿ ಬೇಲಿ ಅಳವಡಿಸದೇ ಇರುವುದರಿಂದ ಮಕ್ಕಳು ಆಟವಾಡುತ್ತ ಹೋಗಿ ಕಂಬ ಮುಟ್ಟಿದರೆ ಅಪಾಯ ಸಂಭವಿಸುವ ಸ್ಥಿತಿ ಇದೆ.
- Advertisement -
ಈ ವಿದ್ಯುತ್ ಟ್ರಾನ್ಸ್‌ಫಾರ್ಮ್‌ರ್ ಕಂಬದಲ್ಲಿ ಸಿಮೆಂಟ್ ಉದುರಿದ್ದು ಒಳಭಾಗದ ಕಬ್ಬಿಣದ ಸರಳುಗಳು ಎದ್ದು ಕಾಣುತ್ತಿವೆ. ಬಲವಾದ ಗಾಳಿ ಬೀಸಿದರೆ ಕಂಬ ನೆಲಕ್ಕೊರಗುವ ಸಾಧ್ಯತೆಗಳಿವೆ. ಕೂಡಲೇ ಈ ಕಂಬ ಬದಲಾಯಿಸಲು ಜೆಸ್ಕಾಂ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.
ವಿದ್ಯುತ್ ಕಂಬ ದುರಸ್ಥಿ ಮಾಡುವಂತೆ ವರ್ಷದ ಹಿಂದೆಯೇ ಅಧಿಕಾರಿಗಳಿಗೆ ತಿಳಿಸಿದ್ದೆವೆ ಆದರೆ ಕಂಬದಲ್ಲಿನ ವಿದ್ಯುತ್ ಸಂಪರ್ಕವನ್ನು ತೆಗೆದಿದ್ದಾರೆ ಹೊರತು ದುರಸ್ಥಿ ಕಾರ್ಯಕ್ಕೆ ಮುಂದಾಗಿಲ್ಲ ಎಂದು ಸ್ಥಳೀಯರೊಬ್ಬರು ತಿಳಿಸಿದರು.
ಇತ್ತೀಚಿಗೆ ಜಿಲ್ಲೆಯಲ್ಲಿ ಬಿರುಸಿನ ಗಾಳಿ ಸಹಿತ ಸುರಿದ ಮಳೆಗೆ ವಿದ್ಯುತ್ ಕಂಬ ಹಾಗೂ ಮರಗಳು ಧರೆಗೆ ಉರುಳಿದ ಘಟನೆಗಳು ಜೆಸ್ಕಾಂ ಮುಂದಿದ್ದರೂ ಕೂಡ ಅಂಗನವಾಡಿ ಕೇಂದ್ರದ ಆವರಣದಲಿರುವ ವಿದ್ಯುತ್ ಪರಿವರ್ತಕ ಕಂಬಗಳನ್ನು ತೆರುವುಗೊಳಿಸದೇ ಜೆಸ್ಕಾಂ ಅಧಿಕಾರಿಗಳು ಹಸುಗೂಸು ಮಕ್ಕಳ ಜೀವನದಲ್ಲಿ ಆಟವಾಡುತ್ತಿರುವುದು ವಿಪರ್ಯಾಸವಾಗಿದೆ.
ಆದಷ್ಟು ಬೇಗ ಅಧಿಕಾರಿಗಳು ಕ್ರಮ ಕೈಗೊಂಡು ಅನಾಹುತವನ್ನು ತಪ್ಪಿಸಲು ಮುಂದಾಗುವರಾ.? ಎಂಬುದನ್ನು ಕಾದು ನೋಡಬೇಕಿದೆ.

