ಬರಹ:ಎನ್.ಎಚ್.ಮದರಕಲ್ಲ
ಹವ್ಯಾಸಿ ಬರಹಗಾರರು, ಯಾದಗಿರಿ
ಓದುವ ಅವ್ಯಾಸಕ್ಕಾಗಿ ಮಕ್ಕಳ ಸ್ನೇಹಿ ಗ್ರಂಥಾಲಯ ಪ್ರತಿ ವರ್ಷದಂತೆ ಈ ವರ್ಷವು ಅಗಸ್ಟ 12(August 12) ರಂದು ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಇದನ್ನು ಎಸ್.ಆರ್. ರಂಗನಾಥನ್(S.R Ranganathan) ಅವರ ಹುಟ್ಟಿದ ದಿನದ ಸವಿನೆನಪಿಗಾಗಿ ನಡೆಸಲಾಗುವುದು. ಕಾರಣ ಅವರು ಗ್ರಂಥಾಲಯ ಕ್ಷೇತ್ರದಲ್ಲಿ ವಿಶೇಷವಾಗಿ ಸಲ್ಲಿಸಿದ ಸೇವೆ ಮತ್ತು ಗ್ರಂಥಾಲಯ ಅಭಿವೃದ್ಧಿಗಾಗಿ ನೀಡಿದ ಮಹತ್ತರ ಕೊಡುಗೆಯ ಕಾರಣಕ್ಕಾಗಿ ಈ ದಿನಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ಆದ್ದರಿಂದಲೇ ಅವರನ್ನು ಸಾರ್ವಜನಿಕ ಗ್ರಂಥಾಲಯದ ಪಿತಾಮಹ ಎಂದು ಕರೆಯುತ್ತಾರೆ.
- Advertisement -
ಕರ್ನಾಟಕದಲ್ಲಿ ಮೈಸೂರು ವಿಶ್ವವಿದ್ಯಾಲಯ ತುಂಬಾ ಹಳೆಯದಾದ (1916) ಗ್ರಂಥಾಲಯವಾಗಿದೆ. ದೇಶದಲ್ಲಿ ದೊಡ್ಡದಾದ (1903 ರಾಷ್ಟ್ರೀಯ ಗ್ರಂಥಾಲಯ) ಗ್ರಂಥಾಲಯ ಕಲ್ಕತ್ತಾದಲಿದೆ.
1965ರ ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಆಕ್ಟ್ ಕರ್ನಾಟಕದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಸ್ಥಾಪಸಿ ಮತ್ತು ನಿರ್ವಹಣೆ ಮಾಡುವ ಕುರಿತು ಹೇಳುತ್ತದೆ. ಸದ್ಯ ಕರ್ನಾಟಕದಲ್ಲಿ 692 ಸಾರ್ವಜನಿಕ ಗ್ರಂಥಾಲಯಗಳು, ಇಡೀ ದೇಶದಲ್ಲಿ 54,856 ಸಾರ್ವಜನಿಕ ಗ್ರಂಥಾಲಯಗಳಿವೆ ಎಂಬ ಮಾಹಿತಿ ಇದೆ. ಅದರೊಂದಿಗೆ ಹಲವಾರು ಸ್ವಯಂ ಸೇವಾ ಸಂಸ್ಥೆಗಳು ಶಾಲಾ-ಕಾಲೇಜುಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಿ, ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ಸೇವೆಯನ್ನು ಒದಗಿಸುತ್ತಿವೆ.
ಗ್ರಂಥಾಲಯಗಳ ಪ್ರಮುಖ ಉದ್ದೇಶ ಹಲವಾರು ರೀತಿಯ ಗ್ರಂಥಗಳು ಅಥವಾ ಪುಸ್ತಕಗಳನ್ನು ಶೇಖರಿಸಿಡುವುದರ ಜೊತೆಗೆ ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ಓದುವ ಹವ್ಯಾಸವನ್ನು ವೃದ್ಧಿಸುವುರೊಂದಿಗೆ, ಉಚಿತವಾಗಿ ವಿತರಣೆ ಮಾಡುವ ಮೂಲಕ ಜನರಲ್ಲಿ ಶೈಕ್ಷಣಿಕ ಅರಿವು ಮೂಡಿಸಿ ಓದುವ ಹವ್ಯಾಸ ಮೂಡಿಸುವುದಾಗಿದೆ. ಅಲ್ಲದೇ ಮಕ್ಕಳಲ್ಲಿ ಮತ್ತು ಸಾರ್ವಜನಿಕರಲ್ಲಿ ವಿಶ್ಲೇಷಣಾತ್ಮಕ, ಸಂಶೋಧನಾ ಮನೋಭಾವ ಬೆಳೆಸುವುದಾಗಿದೆ.
ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ನಮ್ಮ ಪ್ರಾಥಮಿಕ ಶಾಲೆಗಳಲ್ಲಿ ಗ್ರಂಥಾಲಯಗಳನ್ನು ಮಕ್ಕಳ ಸ್ನೇಹಿಯಾಗಿಸಲು ದಿನಾಂಕ: 25.07.2024ರಂದು ಶಾಲೆಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಿ, 1ರಿಂದ 10ನೇ ತರಗತಿವರೆಗಿನ ಎಲ್ಲ ವಿದ್ಯಾರ್ಥಿಗಳಿಗೆ “ಓದುವ ಹವ್ಯಾಸ ಜ್ಞಾನದ ವಿಕಾಸ” ಎಂಬ ಕಾರ್ಯಕ್ರಮದಡಿಯಲ್ಲಿ ಕಡ್ಡಾಯವಾಗಿ ವಾರಕ್ಕೊಂದು ಅವಧಿಯನ್ನು ಓದುವಿಕೆಗಾಗಿ ನಿಗಧಿಪಡಿಸಿ, ಅನುಷ್ಠಾನಗೊಳಿಸಲು ಸುತ್ತೋಲೆ ಹೊರಡಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.
ಇದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ ಆಗುವುದಲ್ಲದೇ, ಶಿಕ್ಷಣದ ಧ್ಯೇಯವಾಗಿರುವ ವಿದ್ಯಾರ್ಥಿಗಳ ಜ್ಞಾನ, ಬುದ್ಧಿ ಮತ್ತು ಮೌಲ್ಯದ ಕ್ರೀಯಾಶೀಲ ವಿಕಾಸಕ್ಕಾಗಿ ಪಠ್ಯಪುಸ್ತಕಗಳ ಓದಿನ ಜೊತೆಗೆ ಇತರೆ ಪೂರಕ ಪುಸ್ತಕಗಳು ಓದುವುದು ಅಗತ್ಯವಾಗಿದೆ. ಪುಸ್ತಕ ಓದುವ ಹವ್ಯಾಸವು ಮಕ್ಕಳಲ್ಲಿ ಶಬ್ಧಭಂಡಾರ ವೃದ್ಧಿಸುತ್ತದೆ ಅಲ್ಲದೇ, ಅವರ ಮನೋವಿಕಾಸಕ್ಕೆ ಪೂರಕವಾಗಿರುತ್ತದೆ. ಅಲ್ಲದೇ ಮಕ್ಕಳಲ್ಲಿ ಶಬ್ಧಭಂಡಾರವಲ್ಲದೇ, ಓದುವಿಕೆಯಲ್ಲಿ ನಿರರ್ಗಳತೆ, ಗ್ರಹಿಕಾ ಸಾಮರ್ಥ್ಯ, ಏಕಾಗ್ರತೆಯ ಶಕ್ತಿ, ಭಾಷಾ ಕೌಶಲ್ಯ ಮತ್ತು ಸೃಜನಾತ್ಮಕ ಬರವಣಿಗೆಗೆ ಪೂರಕವಾಗಿರುತ್ತದೆ ಎಂಬುದು ಇದರ ಹಿಂದಿರುವ ಉದ್ದೇಶವಾಗಿದೆ.
- Advertisement -
ಈ ಹಿನ್ನೆಲೆಯಲ್ಲಿ ಎಲ್ಲ ಶಾಲಾ-ಕಾಲೇಜುಗಳು “ಓದುವ ಹವ್ಯಾಸ ಜ್ಞಾನದ ವಿಕಾಸ” ಎಂಬ ಘೋಷವ್ಯಾಖ್ಯೆಯೊಂದಿಗೆ ಒಂದು ವಾರಗಳ ಕಾಲ ‘ಗ್ರಂಥಾಲಯ ದಿನಾಚರಣೆ’ ಯನ್ನು ಆಚರಿಸುವ ಮೂಲಕ ಗ್ರಂಥಾಲಯವನ್ನು ಮಕ್ಕಳ ಸ್ನೇಹಿಯನ್ನಾಗಿ ಮಾಡುವುದು ಮತ್ತು ಓದುವಿಕೆಯ ಮಹತ್ವವನ್ನು ಮಕ್ಕಳಿಗೆ ತಿಳಿಸುವುದು ತುಂಬಾ ಪ್ರಮುಖವಾಗಿದೆ.

