ಸ್ಫೂರ್ತಿ ಎಂಬ ಎರಡಕ್ಷರದ ಅರ್ಥ ವಿಶಾಲವಾದದ್ದು. ಒಬ್ಬ ವ್ಯಕ್ತಿಯ ವ್ಯಕ್ತಿತ್ವ, ಬದ್ಧತೆ, ಪ್ರಾಮಾಣ ಕತೆ, ನಡತೆ, ಗುಣ, ಸಮಾಜಮುಖಿ ಚಿಂತನೆ, ಮಾನವೀಯತೆ, ವಿಶೇಷ ಸಾಧನೆಗಳ ಅನಾವರಣ ಅಥವಾ ದಿಕ್ಸೂಚಿಯೇ ಸ್ಫೂರ್ತಿ ಎಂಬ ಎರಕ್ಷರದಲ್ಲಿ ಅಡಗಿದೆ. ಸ್ಫೂರ್ತಿಯು ಆಂತರಿಕ ಸ್ಥಿತಿಯಾಗಿದ್ದು ಅದು ವ್ಯಕ್ತಿಗಳ ಗುರಿ ನಿರ್ದಿಷ್ಟ ನಡವಳಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತದೆ. ಇದು ಅನೇಕ ಕ್ಷೇತ್ರಗಳಿಗೆ ಸಂಬAಧಿಸಿದೆ. ಆ ಕ್ಷೇತ್ರಗಳಲ್ಲಿ ವಿವಿಧ ಗುರಿಯ ಸಾಧನೆಗಾಗಿ ಮನುಷ್ಯ ಮತ್ತೊಬ್ಬರಿಂದ ಪ್ರಭಾವಿತನಾಗಿ ಮೊಳಕೆ ಒಡೆದು ಹಾಗೂ ತನ್ನ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲದಿಂದ ಎಲ್ಲಾ ಕಷ್ಟ, ನೋವು, ನಲಿವು, ಸುಖ ಮತ್ತು ಅಡಚಣೆಗಳನ್ನು ದಾಟಿ ಮುನ್ನುಗ್ಗಿ ತನ್ನ ಗುರಿಯನ್ನು ಸಾಧಿಸುತ್ತಾನೆ. ಜೀವನದಲ್ಲಿ ನಡೆಯುವ ಕೆಲವು ಘಟನೆಗಳಿಂದ ಮಾನಸಿಕವಾಗಿ ಗಟ್ಟಿತನವನ್ನು ಅಳವಡಿಸಿಕೊಂಡು ಒಂದು ನಿರ್ದಿಷ್ಟ ನಿರ್ಧಾರಕ್ಕೆ ಬಂದು ಗುರಿ ಸಾಧನೆ ಮಾಡುವುದೂ ಕೂಡ ಒಂದು ರೀತಿಯ ಪ್ರೇರಕ ಶಕ್ತಿ ಎನ್ನಬಹುದು.
ಸ್ಫೂರ್ತಿಯಿಂದ ತಾನು ವೈಯಕ್ತಿಕ ಅಭಿವೃದ್ಧಿಯನ್ನು ಹೊಂದಿ ಜೊತೆಗೆ ಇತರರ ಅಭಿವೃದ್ಧಿಗಾಗಿ ಅವರ ಸಂತೋಷಕ್ಕಾಗಿ ನಿಸ್ವಾರ್ಥ ಉದ್ದೇಶದಿಂದ ವಯಕ್ತಿಕ ಪ್ರತಿಫಲವನ್ನು ನಿರೀಕ್ಷಿಸದೆ ಸಹಾಯ ಮಾಡುವ ಬಯಕೆಯನ್ನು ಹೊಂದುವುದಾಗಿದೆ. ಒಬ್ಬ ವ್ಯಕ್ತಿ ಸಮಾಜಕ್ಕಾಗಿ ಮಾಡಿರುವ ತ್ಯಾಗ, ಇತರರ ಬದುಕಿಗೆ ಬೆಳಕಾಗಿ, ಮಾರ್ಗದರ್ಶಿಯಾಗಿ, ಸಮಾಜದ ಪರಿವರ್ತನೆಗೆ ತನ್ನ ಜೀವನವನ್ನೇ ಮೀಸಲಾಗಿಟ್ಟು, ಸಾಮಾಜಿಕ ಸಾಧನೆಯಲ್ಲಿ ಮೇರು ಶಿಖರವಾಗಿ ಬೆಳೆದು ತಾನು ಜನ್ಮ ತಾಳಿದ ದೇಶಕ್ಕೆ, ಅಷ್ಟೇ ಏಕೆ ಜಗತ್ತಿಗೆ ಮಾದರಿಯಾಗಿ ಜೀವನ ಸಾಗಿಸಿ ಇತರರಿಗೆ ಸ್ಫೂರ್ತಿದಾಯಕರಾಗಿರುವ ಮಹಾಪುರಷರ ಸಾಧನೆಗಳು ನಮ್ಮ ಮುಂದೆ ಜೀವಂತವಾಗಿರುವುದನ್ನು ನಾವು ಕಾಣುತ್ತೇವೆ. ಈ ವಿಶ್ವದಲ್ಲಿ ಅನೇಕ ಸಾಧಕರಿಂದ ಸ್ಫೂರ್ತಿ ಪಡೆಯುತ್ತೇವೆ. ಮಹಾಪುರುಷರು ಮಾಡಿರುವ ಸಾಧನೆಗಳನ್ನು ಓದುವುದರಿಂದ, ಗುರುಗಳ, ಮಾರ್ಗದರ್ಶಕರÀ, ಸಾಧಕರ ಜೀವನದಲ್ಲಿ ನಡೆದ ಕಹಿ ಘಟನೆಗಳಿಂದ, ಅವರು ಮೇಲೆದ್ದು ಛಲದಿಂದ ಸಾಧಕರ ಮೇಲ್ಪಂಕ್ತಿಯಲ್ಲಿರುವುದನ್ನು ತಿಳಿದು ನಮಗೆ ಸ್ಫೂರ್ತಿ ಎಂಬುದು ಒಡೆದು ಮೂಡುತ್ತದೆ. ಆ ಸ್ಫೂರ್ತಿಯೇ ನಮಗೆ ಗುರಿಯನ್ನು ಮುಟ್ಟುವ ಕಡೆಗೆ ಕರೆದೊಯ್ಯುತ್ತದೆ.
ವಿಶ್ವದ ಸುಮಾರು ೮೦ ಭಾಗ ದೇಶಗಳು ಬುದ್ಧ ಧಮ್ಮವನ್ನು ಅಳವಡಿಸಿಕೊಂಡು ಅವರ ಮಧ್ಯಮ ಮಾರ್ಗದಲ್ಲಿ ಕರುಣೆ, ಪ್ರೀತಿ, ಶಾಂತಿ, ನೆಮ್ಮದಿ, ಮಾನವೀಯತೆಯನ್ನು ಬೆಳೆಸಿಕೊಂಡಿರುವುದು ನಮಗೆಲ್ಲಾ ತಿಳಿದಿದೆ. ಬುದ್ಧನ ನಂತರ ಬಸವ, ಬಾಬಾಸಾಹೇಬ್‌ಅಂಬೇಡ್ಕರ್, ಗಾಂಧಿಜೀ, ಸ್ವಾಮಿವಿವೇಕಾನಂದರು, ಸುಭಾಷ್‌ಚಂದ್ರಬೋಸ್, ನೆಲ್ಸನ್‌ಮಂಡೇಲಾ, ಮದರ್‌ತೆರೇಸಾ, ಅಬ್ದುಲ್‌ಕಲಾಂ, ಸಾವಿತ್ರಿಬಾಯಿಫುಲೆ, ನಾಲ್ವಡಿ ಕೃಷ್ಣರಾಜಒಡೆಯರ್ ರವರು ಇಡೀ ಜಗತ್ತಿಗೆ (ರೋಲ್‌ಮಾಡೆಲ್) ಸ್ಫೂರ್ತಿದಾಯಕರಾಗುತ್ತಾರೆ. ವಿಶ್ವದಲ್ಲಿ ಇನ್ನೂ ಅನೇಕ ಮಹಾಸಾಧಕರು ತಮ್ಮದೇ ಆದ ಸಾಧನೆಯನ್ನು ಮಾಡಿ ಇತರರಿಗೆ ಮಾದರಿಯಾಗಿರುವುದನ್ನು ನಾವು ಕಂಡಿದ್ದೇವೆ. ಹಾಗೆಯೇ ವಿಶ್ವದ ಮೊದಲಿನ ಸಾಲಿನಲ್ಲಿರುವ ಮಹಾಪುರುಷರ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ಆದರೆ ಎರಡನೇ ಸಾಲಿನ ಸಾಧಕರ, ಬಗ್ಗೆ ತಿಳಿದುಕೊಳ್ಳಬೇಕಾಗಿದೆ ಎಂಬ ಭಾವನೆಯಿಂದ ಅವರ ಸಾಧನೆಗಳನ್ನು ಕುರಿತು ಈ ಅಂಕಣದಲ್ಲಿ ಹೊರತರಲು ಬಯಸಿದ್ದೇನೆ.
ಹುಟ್ಟಿದ ಮೇಲೆ ಏನನ್ನಾದರೂ ಸಾಧಿಸಬೇಕು ಎಂಬ ಛಲ, ಗುರಿಯನ್ನು ತಲುಪಬೇಕೆಂಬ ತವಕ, ಸಾಧಕರ ಸಾಲಿನಲ್ಲಿ ನಾನು ಒಬ್ಬನಾಗಬೇಕು ಎಂಬ ಕನಸು, ಜೀವನೋತ್ಸಾಹ, ಸಮಾಜದಲ್ಲಿ ಇತರರಿಗೆ, ಮಾದರಿಯಾಗಬೇಕು, ಸ್ಫೂರ್ತಿದಾಯಕರಾಗಬೇಕೆಂಬ ಬಯಕೆ, ತನ್ನನ್ನು ತಾನು ಜಯಿಸಬೇಕೆಂಬ ಅಚಲ ನಿರ್ಧಾರ ಎಂತಹ ಮನುಷ್ಯನನ್ನಾದರೂ ಸಾಧಕರ ಸಾಲಿನಲ್ಲಿ ನಿಲ್ಲಿಸುತ್ತದೆ. ಜೀವನದಲ್ಲಿ ಒಂದು ಸಣ್ಣ ಸಮಸ್ಯೆ ಎದುರಾದರು ಜೀವನವೇ ಬೇಡ ಎಂದು ತೀರ್ಮಾನಿಸುವ ಮನಸ್ಸಿನಂತಹವರ ಮಧ್ಯೆ, ಇಡೀ ವಿಶ್ವವೇ ತಿರುಗಿ ನೋಡುವಂತಹ ಸಾಧಕರ ಬಗ್ಗೆ ಮೆಲುಕನ್ನು ಹಾಕೋಣ.
ಅಧ್ಯಕ್ಷರಾಗಿದ್ದ ಲಿಂಕನ್ ರವರು ತಮ್ಮ ಸೌಜನ್ಯ, ಸತ್ಕಾರ, ಮತ್ತು ಸಮಾನತೆಗೆ ಹೆಸರಾದವರು. ಅವರು ಎಂದೂ ಯಾರಿಗೂ ತಾರತಮ್ಯ ಮಾಡುತ್ತಿರಲಿಲ್ಲ. ಒಂದು ಬಾರಿ ಅವರ ಅಧಿಕಾರಿಯ ಜೊತೆ ಅಡ್ಡಾಡಲು ಹೊರಗೆ ಹೋದಾಗ ಒಬ್ಬ ನೀಗ್ರೋ ಭಿಕ್ಷÄಕ ಅಧ್ಯಕ್ಷರನ್ನು ನೋಡಿ ಸ್ವಾಗತಿಸಿದ. ಅಧ್ಯಕ್ಷರು ಪ್ರತಿಯಾಗಿ ತಮ್ಮ ಹ್ಯಾಟನ್ನು ತೆಗೆದು ಅವನಿಗೆ ನೀಡಿದರು. ಇದನ್ನು ನೋಡಿದ ಅಧಿಕಾರಿಯು ನಿಮ್ಮ ಹ್ಯಾಟನ್ನು ಕೊಳಕು ಬಟ್ಟೆಯ ಭಿಕ್ಷÄಕನಿಗೇಕೆ ನೀಡಿದಿರಿ? ಎಂದು ಕೇಳಿದರು. ಅದಕ್ಕೆ ಅವರು ನಗುತ್ತಾ ಹೇಳಿದರು ನನಗಿಂತ ಯಾರು ಹೆಚ್ಚು ಉದಾರಿಗಳಾಗಿರಬಾರದು ಎಂಬುದು ನನ್ನ ಅನಿಸಿಕೆ. ಏಕೆಂದರೆ ಉದಾರತೆಯು ಎಲ್ಲರ ಹೃದಯವನ್ನು ಗೆಲ್ಲುತ್ತದೆ. ಅದು ವಿನಮ್ರತೆಯು ಇದ್ದ ಕಡೆ ಅರಳುತ್ತದೆ. ವಿನಮ್ರತೆಯೇ ಮಹಾಪುರುಷರ ಹೆಗ್ಗುರುತು ಎಂದು ಹೇಳಿದರು. ಲಿಂಕನ್ ರವರ ಆದರ್ಶ ಇಂದಿನ ಸಮಾಜದಲ್ಲಿ ಎಲ್ಲರಲ್ಲೂ ಹಾಸು ಹೊಕ್ಕಾಗಲಿ ಎಂಬುದು ನಮ್ಮ ಆಶಯ. ಹೃದಯ ಮಿಡಿಯುವ ಮನಸ್ಸುಳ್ಳವರು ಸಮಾಜದಲ್ಲಿ ದೊಡ್ಡವರಾಗುತ್ತಾರೆ.
ಮೂಲತಃ ತುಮಕೂರು ಜಿಲ್ಲೆ, ಕುಣ ಗಲ್ ತಾಲ್ಲೂಕು, ಚೌಡನಕುಪ್ಪೆ ಗ್ರಾಮದ ಹೊನ್ನಯ್ಯ ಮತ್ತು ಮುನಿಯಮ್ಮ ದಂಪತಿಗಳ ಮಗ ಕೆಂಪಹೊನ್ನಯ್ಯಾ ತಾನು ನಾಲ್ಕನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಕಣ ್ಣನ ರೆಟಿನಾಪೊರೆ ಕಳಚಿ ಸಂಪೂರ್ಣ ದೃಷ್ಟಿ ಕಳೆದು ಕೊಂಡರು. ನಂತರ ಮೈಸೂರಿನ ಅಂಧ ಮಕ್ಕಳ ಪಾಠಶಾಲೆಯಲ್ಲಿ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಿ ನಂತರ ಮಹಾರಾಜ ಕಾಲೇಜಿನಲ್ಲಿ ಪದವಿ ಗಳಿಸಿ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದು ಯು.ಪಿ.ಎಸ್.ಸಿ ಪಾಸಾಗಲು ಯಾವುದೇ ತರಬೇತಿ ಪಡೆಯದೇ ಸ್ವ-ಪ್ರಯತ್ನದಿಂದ ಐ.ಎ.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಕರ್ನಾಟಕದಲ್ಲೇ ಅಂಧ ಅಭ್ಯರ್ಥಿ ಐ.ಎ.ಎಸ್ ಪಾಸುಮಾಡಿದವರು ಎಂಬ ಕೀರ್ತಿಗೆ ಕಾರಣರಾಗಿ ಇತಿಹಾಸ ನಿರ್ಮಿಸಿದ್ದಾರೆ. ಕೆಂಪಹೊನ್ನಯ್ಯಾರವರು ನನ್ನ ಹೆಂಡತಿಯೇ ನಿಜವಾದ ಐ.ಎ.ಎಸ್ ಆಫೀಸರ್ ಎಂದು ಹೇಳುತ್ತಾರೆ. ಏಕೆಂದರೆ ಇವರ ಸಾಧನೆಯ ಹಿಂದೆ ಆಕೆಯ ಪರಿಶ್ರಮವಿದೆ. ಆಕೆ ಅವರಿಗೆ ಓದಲು ಅನುಕೂಲವಾಗುವಂತೆ ಆಡಿಯೋ ಮತ್ತು ಟಿಪ್ಪಣ ಗಳನ್ನು ತಯಾರಿಸಿ ಕೊಡುತ್ತಿದ್ದರು. ಜೀವನದಲ್ಲಿ ಎಷ್ಟೇ ಅಡೆ ತಡೆ, ಕಷ್ಟ ನೋವು ಎದುರಾದರು ಅವುಗಳಿಗೆ ಎದೆಗುಂದದೆ ತಾಳ್ಮೆಯಿಂದ ಅವುಗಳನ್ನು ಮೆಟ್ಟಿನಿಂತು ಎದುರಿಸಿ ಮುನ್ನುಗಬೇಕು, ಆಗ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ. ಕಷ್ಟಗಳನ್ನು ಸವಾಲನ್ನಾಗಿ ಸ್ವೀಕರಿಸಿ ಆಗ ಯಶಸ್ಸು ತಾನಾಗಿಯೇ ನಿಮ್ಮನ್ನು ಅರಸಿಕೊಂಡು ಬರುತ್ತದೆ ಎಂದು ಇತರರಿಗೆ ಧೈರ್ಯ ತುಂಬುತ್ತಾರೆ. ಹಾಗಾಗಿ ಇಂತಹವರ ಸಾಧನೆ ನಮಗೆಲ್ಲಾ ಆದರ್ಶವಾಗಲಿ.
ಸರ್ ಐಸಾಕ್ ನ್ಯೂಟನ್ ರವರು ಒಂದು ಡೈಮಂಡ್ ಎಂಬ ನಾಯಿಯನ್ನು ಸಾಕಿದ್ದರು. ಅದನ್ನು ತುಂಬಾ ಪ್ರೀತಿಸುತ್ತಿದ್ದರು. ಒಮ್ಮೆ ರಾತ್ರಿ ನ್ಯೂಟನ್ ರವರು ಮನೆಯಲ್ಲಿ ಇಲ್ಲದಿದ್ದಾಗ ಡೈಮಂಡ್ ಮೇಜಿನ ಮೇಲೆ ಉರಿಯುತ್ತಿದ್ದ ಮೇಣದ ಬತ್ತಿಯನ್ನು ಉರುಳಿಸಿದ ಪರಿಣಾಮ ಅವರ ಎಲ್ಲಾ ಪುಸ್ತಕಗಳು ಸುಟ್ಟು ಹೋದವು. ಅದು ಅವರ ಎಂಟು ವರ್ಷಗಳ ಪರಿಶ್ರಮದ ಫಲವಾಗಿತ್ತು. ನ್ಯೂಟನ್ ಮನೆಗೆ ವಾಪಸ್ಸಾದಾಗ ಆ ದುರಂತ ನೋಡಿ ಅವರು ಪ್ರತಿಕ್ರಿಯಿಸಿದರು. ಡೈಮಂಡನ್ನು ಹತ್ತಿರ ಕರೆದು ನೀನು ಮಾಲೀಕನಿಗೆ ಕೊಟ್ಟಿರುವ ತೊಂದರೆ, ಅದರ ಪರಿಶ್ರಮ ನಿನಗೆ ಸ್ವಲ್ಪವೂ ಗೊತ್ತಿಲ್ಲ ಎಂದು ಹೇಳಿದರು. ಅದನ್ನು ಅವರು ಮಹತ್ತರವಾದ ಕೆಲಸದ ನಷ್ಟ ಎಂದು ಭಾವಿಸಲಿಲ್ಲ ಮತ್ತೆ ಅದನ್ನು ಪ್ರಾರಂಭಿಸಿದರು. “ತಾಳ್ಮೆಯು ಯುಶಸ್ಸಿನ ಕೀಲಿ.” ಭಾವನಾತ್ಮಕವಾಗಿ ವ್ಯಕ್ತಿಗಳು ಸರಿಯಾದ ದೃಷ್ಟಿಯಲ್ಲಿ ವಿಷಯವನ್ನು ಅರಿಯಲು ವಿಫಲರಾಗುತ್ತಾರೆ. ಗಟ್ಟಿವ್ಯಕ್ತಿತ್ವದ ವ್ಯಕ್ತಿಯು ತನ್ನ ಭಾವನೆಯನ್ನು ನಿಯಂತ್ರಿಸಲು ಸಮರ್ಥನಾಗಿರುತ್ತಾನೆ. ಇಂತಹ ವ್ಯಕ್ತಿಗಳು ಸಂಕಷ್ಟದ ಸಮಯದಲ್ಲೂ ಶಾಂತರಾಗಿರುತ್ತಾರೆ. ಹೀಗಾಗಿ ವಾಸ್ತವದೊಂದಿಗೆ ತಮ್ಮ ಆದರ್ಶಗಳನ್ನು ಸೂಕ್ತವಾಗಿ ಹೊಂದಿಸಲು ಸಮರ್ಥರಾಗಿರುತ್ತಾರೆ. ಈ ರೀತಿಯಾದ ವ್ಯಕ್ತಿತ್ವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕೆಂಬುದೇ ನಮ್ಮ ಆಶಯವಾಗಿದೆ.
ಥಾಮಸ್ ಎಡಿಸನ್ ರವರು ಬಲ್ಪ್ ಕಂಡುಹಿಡಿದು ಜಗತ್ತಿಗೆ ಬೆಳಕನ್ನು ನೀಡಿದ ವ್ಯಕ್ತಿ. ಇವರು ಒಂದು ಬಲ್ಟ್ ಕಂಡು ಹಿಡಿಯಲು ಸಾವಿರಕ್ಕೂ ಹೆಚ್ಚು ಬಾರಿ ವೈಫಲ್ಯವನ್ನು ಕಂಡರೂ, ಎದೆಗುಂದದೆ ಈ ಕಾರ್ಯದಲ್ಲಿ ಸೋತರೂ, ಹಿಂಜರಿಯದೆ ಸತತ ಪ್ರಯತ್ನದಿಂದ ಯಶಸ್ಸು ಪಡೆದು ಇಡೀ ಪ್ರಪಂಚಕ್ಕೆ ಬೆಳಕನ್ನು ಕೊಟ್ಟ ಮಹಾಸಾಧಕರಾಗಿ ಹಾಗೂ ಇತರರಿಗೆ ಸ್ಫೂರ್ತಿಯ ಚಿಲುಮೆಯಾಗಿ ಹೊರಹೊಮ್ಮಿದ್ದಾರೆ. “ಸೋಲು ಗೆಲುವಿನ ಮೆಟ್ಟಿಲು” ಎಂಬ ನುಡಿಯನ್ನು ನಾವು ಅರಿಯಬೇಕಾಗಿದೆ.
ವಾಟ್ಸಪ್ ಬಳಸುವ ನಿಮಗೆಲ್ಲ ಜಾನ್‌ಕೋಮ್ ಗೊತ್ತಿರಬೇಕು. ಆತÀ ವಾಟ್ಸಪ್ ನ ಸಹಸಂಸ್ಥಾಪಕ. ಉಕ್ರೇನ್‌ನ ಸಣ್ಣ ಗ್ರಾಮದಲ್ಲಿ ಜನಿಸಿದ ಜಾನ್‌ಕೋಮ್ ಕಷ್ಟದಲ್ಲಿಯೇ ಜೀವನ ಅರಂಭಿಸಿದ. ಈತನಿಗೆ ಫೇಸ್ ಬುಕ್ ಕಂಪನಿಯು ಕೆಲಸ ನೀಡಲು ನಿರಾಕರಿಸಿತು. ಬಳಿಕ ಈತ ತನ್ನ ಸ್ನೇಹಿತ ಆಕ್ಟನ್ ಜೊತೆ ಸೇರಿಕೊಂಡು ವಾಟ್ಸಪ್ ಎಂಬ ಆಪ್ ಅನ್ನು ಅಭಿವೃದ್ಧಿಪಡಿಸಿದ. ಪ್ರತಿತಿಂಗಳು ವಾಟ್ಸಪ್ ಬಳಕೆದಾರರ ಸಂಖ್ಯೆ ೧.೨ ಶತಕೋಟೆ ಹೆಚ್ಚುತ್ತಾ ಹೋಯಿತು. ಈ ಆಪ್ ಅನ್ನು ಕೆಲವು ವರ್ಷಗಳ ಹಿಂದೆ ೧೯ ಶತಕೋಟಿ ಡಾಲರ್‌ಗೆ ಫೇಸ್ ಬುಕ್ ಕಂಪನಿಯು ಖರೀದಿಸಿತು. ಒಂದು ಸಮಯದಲ್ಲಿ ಉದ್ಯೋಗ ನೀಡಲು ನಿರಾಕರಿಸಿದ ಕಂಪನಿಯೇ ಈತ ಅಭಿವೃದ್ಧಿ ಪಡಿಸಿದ ಆಪ್ ಅನ್ನು ಖರೀದಿಸಿದರು, ಎಂತಹ ಸಾಧನೆ ನೋಡಿ. ಎಂತಹ ಅದ್ಭುತ ಚಾಲೆಂಜ್ ಎಂಬುದನ್ನು ನಾವು ಅರಿಯಬೇಕಾಗಿದೆ. ಇಂತಹ ಸಾಧನೆಗಳೆ ನಮಗೆ ಮಾದರಿಯಾಗಬೇಕು. ಇಂತಹ ನಿದರ್ಶನಗಳಿಂದ ನಾವೂ ಕೂಡ ಜೀವನದಲ್ಲಿ ಸಾಧಕರಾಗುವ ಕಡೆ ಮುನ್ನುಗ್ಗಬೇಕು.
ಮನುಕುಲವನ್ನು ಪ್ರೀತಿಸಬೇಕು ಮತ್ತು ಸೇವೆ ಮಾಡಬೇಕು ಈ ರೀತಿಯ ಮನಸ್ಸುಗಳು ಇಂದಿನ ಸಮಾಜಕ್ಕೆ ಅತ್ಯಂತ ಅಗತ್ಯವಾಗಿದೆ. ಸಂಬAಧಗಳನ್ನು ಮಾಡುವುದು ದೊಡ್ಡದಲ್ಲ ಅದನ್ನು ಉಳಿಸಿಕೊಳ್ಳುವ ಜಾಣ್ಮೆಯು ನಮಗಿರಬೇಕು. ಸ್ವಾರ್ಥ ಬಿಟ್ಟು ಸಂತೋಷವನ್ನು ಕಾಣುವ ದಿಕ್ಕಿನಲ್ಲಿ ಸಾಗಬೇಕು. ಬೇರೆಯವರನ್ನು ನೂರಕ್ಕೆ ನೂರರಷ್ಟು ನಂಬಿದರೆ ಅವರು ಕೂಡ ಪ್ರಾಮಾಣ ಕರಾಗಿರುತ್ತಾರೆ. ಇಲ್ಲಿ ನಂಬಿಕೆ ಬಹಳ ಮುಖ್ಯ, ಅಪನಂಬಿಕೆ ಸಾವಿರ ಗೊಂದಲಗಳಿಗೆ ಕಾರಣವಾಗುತ್ತದೆ. ಸತÀತ ಪ್ರಯತ್ನ, ನಿರಂತರ ಶ್ರಮದಿಂದ ಮಹತ್ವವಾದುದನ್ನು ಸಾಧಿಸಬಹುದು. ನೀವು ಇತರರಿಗೆ ಸಹಾಯ ಮಾಡಿದರೆ ಪ್ರಕೃತಿ ನಿಮಗೆ ಬೇಕಾದಷ್ಟು ನೀಡುತ್ತದೆ. ನೀವು ಗಳಿಸುವುದಕ್ಕಿಂತ ಹೆಚ್ಚು ಸಹಾಯ ಮಾಡಿ ಅದಕ್ಕೆ ಹತ್ತರಷ್ಟು ನಿಮಗೆ ಲಭಿಸುತ್ತದೆ ಇದೇ ಪ್ರಕೃತಿಯ ನಿಯಮ! ಕ್ಷಮಾಗುಣ ನಮ್ಮನ್ನು ಬಹಳ ಎತ್ತರಕ್ಕೆ ಕೊಂಡೊಯ್ಯುತ್ತದೆ. ಗೊಬ್ಬರ ಹಾಕಿದ ಹೊಲ ಊಟ ನೀಡಿದ ಮನೆ ಎಂದಿಗೂ ಕೆಡುವುದಿಲ್ಲ. ಕೊಡುವುದರಲ್ಲಿ ಇರುವ ಆನಂದ ಬೇರೆಲ್ಲೂ ಕಾಣಲು ಸಾಧ್ಯವಿಲ.್ಲ ನಿಮ್ಮ ಕಠಿಣ ಪರಿಶ್ರಮದಿಂದ ನೀವೇ ಇಂದು ಮತ್ತು ನಾಳೆಯಾಗಬೇಕು. ಏಕೆಂದರೆ ಅಭ್ಯಾಸವು ಪರಿಪೂರ್ಣತೆಯನ್ನು ನೀಡುತ್ತದೆ. ಬಾನೆತ್ತರಕ್ಕೆ ಕೊಂಡೊಯ್ಯುತ್ತದೆ.
ಬುದ್ಧನ ಮಧ್ಯಮ ಮಾರ್ಗವನ್ನು ಅನುಸರಿಸಿ ಜೀವನದಲ್ಲಿ ಯಾವಾಗಲೂ ನೆಮ್ಮದಿಯ ಜೀವನ ಸಾಗಿಸಬಹುದು. ನಿರಾಶಾವಾದಿಯಾಗಬೇಡಿ, ಆಶಾವಾದಿಯಾಗಿ ಬದುಕು ಸಾಗಿಸಬೇಕು. ಏಕೆಂದರೆ ನಿರಾಶಾವಾದ ನಿಮ್ಮನ್ನು ಏನನ್ನು ಸಾಧಿಸಲು ಬಿಡುವುದಿಲ್ಲ. ಇತರರನ್ನು ಪ್ರೀತಿಯಿಂದ ಮಾತನಾಡಿಸಿ ಒಂದು ದಯೆಯ ಮಾತು, ಪ್ರೀತಿಯ ಅಪ್ಪುಗೆ, ನಿಷ್ಕಲ್ಮಶ ನಗುವು ಜೀವನವನ್ನು ಪೂರ್ಣವಾಗಿ ಬದುಕಿಸುವುದು ಮತ್ತು ಬಹಳ ಭಿನ್ನತೆಯನ್ನು ಉಂಟುಮಾಡುವುದು. ಬೇರೆಯವರ ಬದುಕಿನಲ್ಲಿ ಭಿನ್ನತೆಯನ್ನು ಉಂಟುಮಾಡುವ ಶಕ್ತಿ ನಮ್ಮಲ್ಲಿದೆ. ಅದನ್ನು ಸಾಧ್ಯವಾದಷ್ಟು ಬಾರಿ ಬಳಸಲು ನಾವು ಪಣತೊಡೋಣ. ಪ್ರೀತಿಯು ಎಲ್ಲಾ ಜಾತಿ, ದೇಶ ಜನಾಂಗ ಹಾಗೂ ಲಿಂಗವನ್ನು ಮೀರಿರುತ್ತದೆ. ಅದಕ್ಕೆ ದೇಶ, ಅಥವಾ ಜಾತಿ ಇಲ್ಲ ಅದು ಜನರನ್ನು ಅವರ ಸಾಮಾಜಿಕ ಅಂತಸ್ತಿನ ಪ್ರಕಾರ ಅಳೆಯುವುದಿಲ್ಲ. ಯಾವ ತಡೆಯಿಲ್ಲದೆ ನಾವು ಪ್ರೀತಿಯನ್ನು ಕಲಿಯಬಹುದು. ಈ ವಿಶ್ವದಲ್ಲಿ ಅವರ ಅಂತಸ್ತು, ದುಃಸ್ಥಿತಿ, ಬಡತನ, ರೋಗಿ, ಅನಾಥರೆಂದು ಕಡೆಗಣ ಸಬಾರದು. ಅಂತಹ ಜನರಿಗೆ ತುಂಬು ಹೃದಯದ ಪ್ರೀತಿ ಸುರಕ್ಷತೆಯ ಭಾವ ಹಾಗೂ ನೆರವು ನೀಡಿದರೆ ನಮಗೆ ಆನಂದ ಸಂತೃಷ್ತಿ ಹಗೂ ಸಂತೋಷ ದೊರಕುತ್ತದೆ. ಸಂತೋಷವೂ ಪ್ರೀತಿ ಹಾಗೂ ಸೇವೆಯ ನಿರ್ಣಾಯಕ ಪ್ರತಿಫಲ.
ಹೀಗೆ ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವ ಭಾವನೆ, ಮಾನವೀಯತೆಯ ಮೌಲ್ಯಗಳನ್ನು ತಮ್ಮದಾಗಿಸಿಕೊಳ್ಳಬೇಕು. ಕಠಿಣ ಪರಿಶ್ರಮ ನಿರಂತರವಾದ ಅಭ್ಯಾಸ ಸಾಮಾಜಿಕ ಬದ್ಧತೆ, ಸಾಧಿಸಬೇಕೆಂಬ ಛಲ, ಗುರಿಯ ಕಡೆ ಮುನ್ನುಗ್ಗುವ ದೂರ ದೃಷ್ಟಿ, ನಾನು ಸಾಧಿಸಿ ಸಮಾಜಕ್ಕಾಗಿ ಏನನ್ನಾದರೂ ನೀಡಬೇಕೆಂಬ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಈ ಜಗತ್ತಿನಲ್ಲಿ ಫಲಿತಾಂಶ ನೀಡುವವರ ಅನಿವಾರ್ಯತೆ ಇದೆ. ನಾವು ಫಲವನ್ನು ನೀಡಿದರೆ ನಮ್ಮ ಜಾತಿ, ಜನಾಂಗ, ಬಣ್ಣ ಮತ್ತು ವಿದ್ಯಾರ್ಹತೆ ಏನೇ ಇರಲಿ ಸಮಾಜದಲ್ಲಿ ಅಂಗೀಕರಿಸಲ್ಪಡುತ್ತದೆ. ಬದ್ಧತೆಯಿಂದ ಕೆಲಸ ಮಾಡುವವರಿಗಾಗಿ ಪ್ರಪಂಚ ಕಾಯುತ್ತಿದೆ. ಶ್ರಮ ಪಟ್ಟು ಹೆಚ್ಚು ಕೆಲಸ ಮಾಡಿದಷ್ಟು ಯಶಸ್ಸು ಕಟ್ಟಿಟ್ಟ ಬುತ್ತಿ. ನಿಜವಾದ ಸಮರ್ಪಣೆಯ ಭಾವ ಹಾಗೂ ಬದ್ಧತೆಗೆ ದೀರ್ಘಕಾಲದಲ್ಲಿ ಬೆಲೆದೊರಕುತ್ತದೆ. ಬದುಕಿನಲ್ಲಿ ಯಶಸ್ಸನ್ನು ಗಳಿಸಬೇಕೆಂದರೆ ದೃಢಪ್ರಯತ್ನವನ್ನು ನಿಮ್ಮ ಆಪ್ತ ಗೆಳೆಯನನ್ನಾಗಿ ಮಾಡಿಕೊಳ್ಳಿ. ಅನುಭವವನ್ನು ನಿಮ್ಮ ಆಪ್ತ ಸಲಹೆಗಾರರನ್ನಾಗಿ, ಜಾಗರೂಕತೆಯನ್ನು ನಿಮ್ಮ ಹಿರಿಯಣ್ಣನಾಗಿ ಹಾಗೂ ಆಶಾಭಾವವನ್ನು ನಿಮ್ಮ ಸಂರಕ್ಷಕನಾಗಿ ಮಾಡಿಕೊಳ್ಳಿ. ದ್ವೇಷವು ನಮ್ಮನ್ನು ಬಂಧಿಸುತ್ತದೆ. ಒತ್ತಡ ಮತ್ತು ಆತಂಕವನ್ನು ಉಂಟು ಮಾಡುತ್ತದೆ. ನಮ್ಮ ಸಾಮರ್ಥ್ಯವನ್ನು ಕುಗ್ಗಿಸುತ್ತದೆ ಹಾಗೂ ನಿನ್ನ ಅಧಃಪತನಕ್ಕೆ ಕಾರಣವಾಗುತ್ತದೆ. ಶತ್ರುಗಳನ್ನು ಕ್ಷಮಿಸಿದರೆ ನಮ್ಮಲ್ಲಿ ಶಾಂತಭಾವ ಉಂಟಾಗುತ್ತದೆ.
ಮಸಾಣದಲ್ಲಿ ಸುಟ್ಟು ಬೂದಿಯಾಗುವ ಈ ಶರೀರಕ್ಕೆ ಏಕೆ ಬೇಕು ದ್ವೇಷ, ಅಸೂಯೆ ? ಕೆಡುಕನ್ನು ಉಂಟು ಮಾಡುವ ಸಣ್ಣತನವೇಕೆ? ಒಟ್ಟಾರೆ ಈ ಮಹಾಸಾಧಕರ ಮುಂದೆ ಕಿಂಚಿತ್ತಾದರೂ ನಾವು ಏನನ್ನಾದರೂ ಒಳ್ಳೆಯ ಕೆಲಸ ಮಾಡಬೇಕು, ಜನ್ಮ ನೀಡಿದ ಭಾರತಾಂಬೆಗೆ, ಹಾಗೂ ಭೂಮಿಗೆ ಏನನ್ನಾದರೂ ವಾಪಸ್ಸು ನೀಡಬೇಕು (ವಿ ಮಷ್ಟ್ ಪೇ ಬ್ಯಾಕ್ ಟು ದಿ ಸೊಸೈಟಿ) ಎಂಬ ತವಕ ಪ್ರತಿಯೊಬ್ಬರ ಹೃದಯದಲ್ಲಿ ಮನೆ ಮಾಡಬೇಕು. ಯಾವಾಗಲೂ ಸಾಧನೆ ಮಾತಾಡಬೇಕು, ಮಾತನಾಡುವುದೇ ಸಾಧನೆಯಾಗಬಾರದು. ಸ್ಫೂರ್ತಿಯಿಂದಲೇ ಸಾಧನೆ, ಸಾಧನೆಯೇ ಸ್ಫೂರ್ತಿ. ಜೀವನ ನಿಂತ ನೀರಾಗಬಾರದು, ಹರಿಯುವ ಮಹಾನದಿಯಾಗಬೇಕು. ಒಂದು ಕಹಿ ಘಟನೆಯಿಂದ ಛಲ ಹುಟ್ಟುತ್ತದೆ. ಈ ಛಲದಿಂದಲೇ ಏನನ್ನಾದರೂ ಸಾಧಿಸುವ ಮನಸ್ಸು ಮಾಡುವುದು ಹಾಗೂ ಸಾಧಿಸಿ ತೋರಿಸುವುದು. ದೊಡ್ಡ ಅನಾಹುತಗಳ ಪರಿಣಾಮವೇ ಮನುಷ್ಯ ಘಟ್ಟಿ ನಿರ್ಧಾರಮಾಡಿ ಸಾಧಕರಾಗಲು ಬಯಸುವುದು. ಒಂದು ಮುಕ್ತಾಯದಿಂದ ಹೊಸದೊಂದು ಹುಟ್ಟುವುದು, ಆ ಹುಟ್ಟಿನಿಂದಲೇ ಜೀವನ ಪರಿವರ್ತನೆ ಕಡೆಗೆ ಸಾಗುವುದು. ನೀನು ಜೀವಿಸು, ನನ್ನನ್ನು ಜೀವಿಸಲು ಬಿಡು ಎನ್ನುವ ಮನೋಭಾವನೆ, ಪರಿಶುದ್ಧ ಹೃದಯ ನಮ್ಮದಾಗಬೇಕು. “ತಾಳಿದವನು ಬಾಳಿಯಾನು” ಎಂಬ ನುಡಿಮುತ್ತಿನಂತೆ ಸಾಧನೆಗಾಗಿ ಬದುಕಬೇಕು, ಬದುಕುವುದೇ ಸಾಧನೆಗಾಗಿ ಎಂಬ ಅಚಲ ನಿರ್ಧಾರವಿರಬೇಕು. ಇಂದಿನ ಯುವ ಸಮುದಾಯ, ಈ ದಿಕ್ಕಿನಲ್ಲಿ ಯೋಚಿಸಿ, ಪರಿವರ್ತನಗೆ ಒಳಗಾಗಬೇಕು. ಆಗ ಮಾತ್ರ ಸಮಾಜ ಪ್ರಗತಿಯನ್ನು ಕಾಣಲು ಸಾಧ್ಯವಾಗುತ್ತದೆ.
-ಪ್ರೊ. ಸಿ. ಶಿವರಾಜು
ಅಧ್ಯಕ್ಷರು, ಸಂಸ್ಕೃತ ವಿಭಾಗ,
ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು-೫೬.
ಅಧ್ಯಕ್ಷರು, ಸಂಸ್ಕೃತ ವಿಭಾಗ,
ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು-೫೬.

