ಬೀದರ :— ಬೀದರ ಪೊಲೀಸರ ಸಾಹಸಕ್ಕೆ ಮತ್ತೊಂದು ವಿಜಯದ ಗರಿ ಸೇರಿದೆ. ಅಪರಾಧ ಜಗತ್ತಿನ ಕಾಳ ಸಂತೆಯಲ್ಲಿ ನಿರ್ಭೀತಿಯಿಂದ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಪಡೆದ ಬೀದರ ಜಿಲ್ಲಾ ರೌಡಿ ನಿಗ್ರಹದಳದ ಪೊಲೀಸರು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಖದೀಮರನ್ನು ಬಂಧಿಸಿ ಗಾಂಜ ಜಪ್ತಿ ಮಾಡಿ ಪ್ರಕರಣ ಒಂದು ದಾಖಲಿಸಿಕೊಂಡ ಘಟನೆಯೊಂದು ವರದಿಯಾಗಿದೆ .
ಜಿಲ್ಲಾ ಪೊಲೀಸ್ ಅಧೀಕ್ಷಕ ಶ್ರೀ ಚೆನ್ನಬಸಣ್ಣ ಎಸ್ ಎಲ್, ಹೆಚ್ಚುವರಿ ಎಸ್ಪಿ ಮಹೇಶ್ ಮೇಘಣ್ಣನವರ್ ದಿವ್ಯ ನಿರ್ದೇಶನದಲ್ಲಿ ಖಚಿತ ಮಾಹಿತಿ ಪಡೆದ ಬೀದರ್ ನಗರದ ರೌಡಿ ನಿಗ್ರಹದಳದ ಅಧಿಕಾರಿ ಶ್ರೀ ಹಣಮರೆಡ್ಡೆಪ್ಪ ಪಿ ಐ ಗಾಂಧಿ ಪೊಲೀಸ್ ಠಾಣೆ ತಮ್ಮ ತಂಡದವರೊಂದಿಗೆ ಗಾಂಧಿ ಗಂಜ್ ಠಾಣೆ ವ್ಯಾಪ್ತಿಯಲ್ಲಿರುವ ಮಕ್ದುಮ್ ಜಿ ಬಡಾವಣೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಮಿಂಚಿನ ದಾಳಿ ನಡೆಸಿ 23. 498 ಕಿಲೋ ಗಾಂಜಾ ಹಾಗೂ 20,000 ರೂ .ನಗದು ಮತ್ತು ಒಂದು ಮೊಬೈಲ್ ಹೀಗೆ 23 ಲಕ್ಷ 70 ಸಾವಿರ 300 ರೂ. ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ತೀವ್ರ ಗತಿಯಲ್ಲಿ ನಡೆಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಶ್ರಮಿಸಿದ ರೌಡಿನಿಗ್ರಹದಳದ ಟೀಮ್ಗೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿ ಜಿಲ್ಲೆಯಲ್ಲಿ ಅಹಿತಕರ ಚಟುವಟಿಕೆಗೆ ಕಡಿವಾಣ ಹಾಕಲು ಪೊಲೀಸರು ಹೆಚ್ಚಿನ ನಿಗ ವಹಿಸಿದ್ದಾರೆ ಎಂದು ಎಸ್ ಪಿ ಶ್ರೀ ಚನ್ನಬಸಣ್ಣ ರವರು ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ.

