ಯಾದಗಿರಿ: ಪಿಎಸ್‌ಐ ಪರೀಕ್ಷಾ ಹಗರಣ ಮಾಸುವ ಮುನ್ನವೇ, ಈಗ ಅಂತಹದ್ದೇ ಮತ್ತೊಂದು ಹಗರಣವೊಂದು ಯಾದಗಿರಿಯಲ್ಲಿ ಬಯಲಾಗಿದೆ. ಕೆಪಿಎಸ್‍ಸಿ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ನಕಲು ಮಾಡುತ್ತಿದ್ದ ಯುವಕ ಹಾಗೂ ಆತನಿಗೆ ಸಹಕರಿಸಿದ ಇಬ್ಬರು ಆರೋಪಿಗಳನ್ನು ಸಹ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆದ ಆರೋಪಿಯನ್ನು ಅಫಜಲಪುರದ ಸೊನ್ನಾ ಗ್ರಾಮದ ಪುಟ್ಟು ಎಂದು ಗುರುತಿಸಲಾಗಿದೆ. ಮತ್ತಿಬ್ಬರ ಹೆಸರನ್ನು ಪೊಲೀಸರು ಬಹಿರಂಗ ಪಡಿಸಿಲ್ಲ. ಆರೋಪಿ ಬ್ಲೂಟೂತ್ ಬಳಸಿಕೊಂಡು ಪರೀಕ್ಷೆ ಬರೆಯುತ್ತಿದ್ದ. ಈ ವೇಳೆ ವಿಚಾರಣೆ ನಡೆಸಿದಾಗ ಆತ ನಕಲಿ ಅಭ್ಯರ್ಥಿ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆ ನಗರ ಪೊಲೀಸ್ ಠಾಣೆಗೆ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ಹಾಗೂ ಎಸ್ಪಿ ಜಿ.ಸಂಗೀತಾ ದೌಡಾಯಿಸಿ, ಕೆಲಹೊತ್ತು ಚರ್ಚೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ ಇಂದು ಮತ್ತು ನಾಳೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಯಲ್ಲಿ ಬ್ಲೂಟೂತ್ ಬಳಕೆ ಮಾಡುವ ಮಾಹಿತಿ ಎಸ್ ಪಿ ಗೆ ಬಂದಿದೆ. ಈ ಹಿನ್ನಲೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಬ್ಲೂಟೂತ್ ಬಳಕೆ ಮಾಡಿ ಪರೀಕ್ಷೆ ಬರೆಯುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಪ್ರಮುಖ ಆರೋಪಿಯನ್ನು ವಶಕ್ಕೆ ಪಡೆದು ಬ್ಲೂಟೂತ್ ಡಿವೈಸ್, ಮೊಬೈಲ್ ಜಪ್ತಿ ಮಾಡಲಾಗಿದೆ. ಇಲ್ಲಿವರಗೇ ಮೂವರನ್ನು ವಿಚಾರಣೆ ಮಾಡಲಾಗುತ್ತಿದೆ. ವಿಚಾರಣೆ ನಡೆಸಿದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದರು.
- Advertisement -
ರಾಜ್ಯಾದ್ಯಂತ 350 ಕೇಂದ್ರಗಳಲ್ಲಿ ಶನಿವಾರ ಮತ್ತು ಭಾನುವಾರ ಸರಕಾರಿ ವಿವಿಧ ನಿಗಮಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಪರೀಕ್ಷೆ ನಡೆಯುತ್ತಿದ್ದು, ಯಾದಗಿರಿ ಜಿಲ್ಲೆಯ 17 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ, ನಾಳೆಯ ಕೂಡ ಪರೀಕ್ಷೆ ನಡೆಯಲಿದೆ,
ಒಟ್ಟಾರೆಯಾಗಿ ಯಾದಗಿರಿಯಲ್ಲಿ ಐದಾರು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಪೊಲೀಸರು. ಈ ಅಕ್ರಮದ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ,

