ಯಲಹಂಕ: ಕನ್ನಡ ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮನದ ಕಡಲು ಚಿತ್ರದ ಚಿತ್ರೀಕರಣದ ವೇಳೆ ಅವಗಡ ಒಂದು ಸಂಭವಿಸಿದ್ದು ಲೈಟ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮೋಹನ್ ಕುಮಾರ್ (24) 30 ಅಡಿ ಎತ್ತರದ ಏಣಿಯಿಂದ ಬಿದ್ದು ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಗೊರಗುಂಟೆ ಪಾಳ್ಯದ ಸ್ಪರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ನಿರ್ದೇಶಕ ಯೋಗರಾಜ ಭಟ್, ನಿರ್ಮಾಪಕ ಈ ಕೃಷ್ಣಪ್ಪ, ಮ್ಯಾನೇಜರ್ ಸುರೇಶ್, ಅಸಿಸ್ಟೆಂಟ್ ಮ್ಯಾನೇಜರ್ ಮನೋಹರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಘಟನೆಯ ವಿವರ: ಇದೇ ತಿಂಗಳ 3ನೇ ತಾರೀಕು ಮಂಗಳವಾರ ಅಡಕಮಾರನಹಳ್ಳಿ ಬಳಿಯ ವಿ ಆರ್ ಎಲ್ ಗೋಡೌನ್ ನಲ್ಲಿ ಚಿತ್ರೀಕರಣ ನಡೆಯುತ್ತಿದ್ದು ಸಂಜೆ ಸುಮಾರು 5 ಗಂಟೆಯ ಸಮಯದಲ್ಲಿ ಮೃತ ಮೋಹನ್ ಕುಮಾರ್ ಮತ್ತು ಆತನ ಸಹೋದರರು 30 ಅಡಿಯ ಏಣಿಯನ್ನು ಬಳಸಿ ಮೇಲೆ ಕಟ್ಟಿದ್ದ ಲೈಟನ್ನು ಬಿಚ್ಚಲು ಮುಂದಾಗಿದ್ದು ಏಣಿಯು ಜಾರಿ ಮೇಲಿದ್ದ ಮೋಹನ್ ಕುಮಾರ್ ಕೆಳಗೆ ಬಿದ್ದಿದ್ದಾನೆ ಬಿದ್ದ ರಭಸಕ್ಕೆ ತಲೆಗೆ ತೀವ್ರ ಸ್ವರೂಪದ ಪೆಟ್ಟಾಗಿದ್ದು ರಕ್ತಸ್ರಾವ ಉಂಟಾಗಿದೆ ಕೂಡಲೆ ಆತನನ್ನು ಸಹೋದರರು ಮತ್ತು ಇತರರು ನೆಲಮಂಗಲ ಬಳಿಯ ವಿಪಿ ಮ್ಯಾಗ್ನೆಸ್ ಆಸ್ಪತ್ರೆಗೆ ಸಾಗಿಸಿದ್ದು ಆಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿರುತ್ತಾರೆ ಅದರಂತೆ ಗೊರಗುಂಟೆಪಾಳ್ಯ ಬಳಿಯ ಸ್ಪರ್ಶ ಆಸ್ಪತ್ರೆಗೆ ಗಾಯಾಳುವನ್ನು ಸೇರಿಸಿದ್ದು ತಲೆಯಲ್ಲಿ ತೀವ್ರ ರಕ್ತಸ್ರಾವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಸಂಬಂಧಿಕರ ಆರೋಪ:
ವಿ ಆರ್ ಎಲ್ ಗೋಡನ್ ನಲ್ಲಿ ಶೂಟಿಂಗ್ ನಡೆಯುತ್ತಿದ್ದು ಶೂಟಿಂಗ್ ಸಂದರ್ಭದಲ್ಲಿ ಯಾವುದೇ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿಲ್ಲ ಜೊತೆಗೆ ಕೆಲಸಕ್ಕೆ ಬೇಕಾಗುವಂತ ಸುಸಜ್ಜಿತ ಉಪಕರಣಗಳನ್ನು ನೀಡಿಲ್ಲ ಇದರಿಂದಾಗಿ ತಮ್ಮ ಮೃತಪಟ್ಟಿದ್ದಾನೆ ಆದ್ದರಿಂದ ಮನದ ಕಡಲು ಚಿತ್ರದ ಮ್ಯಾನೇಜರ್ ಸುರೇಶ್, ಅಸಿಸ್ಟೆಂಟ್ ಮ್ಯಾನೇಜರ್ ಮನೋಹರ್, ಚಿತ್ರದ ನಿರ್ಮಾಪಕ ಈ.ಕೃಷ್ಣಪ್ಪ, ನಿರ್ದೇಶಕ ಯೋಗರಾಜ್ ಭಟ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮೃತನ ಅಣ್ಣ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
- Advertisement -

