ಅತಿವೃಷ್ಠಿಯಿಂದ ಆದ ಹಾನಿಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಿ; ಬಾಕಿ ಮನೆ ಹಾನಿ ಪರಿಹಾರ ಶೀಘ್ರ ವಿತರಿಸಿ: ಸಚಿವ ಶರಣಬಸಪ್ಪ ದರ್ಶನಾಪುರ
ಸತ್ಯಕಾಮ ವಾರ್ತೆ ಯಾದಗಿರಿ;
ಅತಿವೃಷ್ಠಿಯಿಂದಾದ ಬೆಳೆ ಹಾನಿ ಮತ್ತು ಮನೆ ಹಾನಿ ಕುರಿತಂತೆ ಪರಿಶೀಲನೆ ನಡೆಸಿ ಶೀಘ್ರ ವರದಿ ಸಲ್ಲಿಸುವುದರ ಜೊತೆಗೆ ಈ ಹಿಂದೆ ಮನೆ ಹಾನಿಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಪರಿಹಾರವನ್ನು ಆಧ್ಯತೆ ಮೇಲೆ ವಿತರಿಸುವಂತೆ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪುರ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಇಂದು ಪ್ರಕೃತಿ ವಿಕೋಪದ ಅಡಿಯಲ್ಲಿ ಬೆಳೆ,ರಸ್ತೆ, ಮೂಲಸೌಕರ್ಯ ಹಾನಿಯಾದ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
- Advertisement -
ಜಿಲ್ಲೆಯ ವಿವಿಧ ತಾಲೂಕಗಳಲ್ಲಿ ಇತ್ತೀಚಿಗೆ ಸುರಿದ ಮಳೆಯಿಂದಾಗಿ ಬೆಳೆ ನಷ್ಟವಾಗಿರುವ ಬಗ್ಗೆ ಜಂಟಿ ಸಮೀಕ್ಷೆ ನಡೆಸಬೇಕು. ಅದರಂತೆ ಮನೆ ಹಾನಿ,ರಸ್ತೆ ಮೂಲಸೌಕರ್ಯಗಳ ಹಾನಿ ಕುರಿತು ಶೀಘ್ರ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ತಿಳಿಸಿದರು.
ಜಿಲ್ಲೆಯ ಸಿರವಾಳದಿಂದ ಅಣಬಿ ವರೆಗೆ ಹಾಗೂ ಶಹಾಪುರದಿಂದ ಶಿರವಾಳದವರೆಗೆ ಹಾಗೂ ಇಬ್ರಾಹಿಂಪುರದಿಂದ ಚಟ್ನಳ್ಳಿ ವರೆಗೆ ರಸ್ತೆ ಹಾನಿಯಾಗಿದೆ. ಈ ರಸ್ತೆಗಳ ಮಧ್ಯೆ ಭಾರತಮಾಲಾ, ರೈಲ್ವೆ ಕಾಮಗಾರಿ ನಡೆಯುತ್ತಿರುವುದರಿಂದ ಈ ಕುರಿತಂತೆ ಜಂಟಿ ಸಹಯೋಗದೊಂದಿಗೆ ಸಾಧ್ಯತೆ ಇದ್ದಲ್ಲಿ ರಸ್ತೆ ದುರಸ್ತಿ ಕೈಗೊಳ್ಳುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ, ಅವಶ್ಯಕ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಸಚಿವರು ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಆಗಿರುವ ಬಿತ್ತನೆ, ಬೆಳೆ ಹಾನಿ, ಭೀಮಾ, ಕೃಷ್ಣ ನದಿ ವ್ಯಾಪ್ತಿಯಲ್ಲಿ ಬೆಳೆ ಪರಿಸ್ಥಿತಿ, ರಸಗೊಬ್ಬರದ ಅವಶ್ಯಕತೆ, ಬೆಳೆವಿಮೆ ಪರಿಹಾರ ವಿತರಣೆ, ತೋಟಗಾರಿಕಾ ಇಲಾಖೆ ವ್ಯಾಪ್ತಿಯಲ್ಲಿ ಆದ ಬೆಳೆ ಹಾನಿ, ಪ್ರೂಟ್ಸ್ ತಂತ್ರಾಂಶದಲ್ಲಿ ರೈತರ ನೋಂದಣಿ ಕುರಿತಂತೆ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರ, ಜಿಲ್ಲಾಧಿಕಾರಿ ಡಾ.ಸುಶೀಲ ಬಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ಸಂಗೀತ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ವಿಜಯಕುಮಾರ ಮಡ್ಡೆ, ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ರತೇಂದ್ರನಾಥ ಸೂಗೂರು ಸೇರಿದಂತೆ ಎಲ್ಲಾ ತಾಲೂಕಿನ ತಹಶೀಲ್ದಾರರ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

