ವರದಿ: ಕುದಾನ್ ಸಾಬ್
ಸತ್ಯಕಾಮ ವಾರ್ತೆ ಯಾದಗಿರಿ:
ದೀಪದ ಕೆಳಗೆ ಕತ್ತಲು ಎಂಬಂತೆ ಬಯಲು ಶೌಚಮುಕ್ತ ಯೋಜನೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಜಿಲ್ಲಾಡಳಿತ ಭವನದಲ್ಲೇ ಶೌಚಾಲಯಗಳ ಅವ್ಯವಸ್ಥೆ ಕಂಡು ಇಲ್ಲಿನ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಪರದಾಡುವ ಶೋಚನೀಯ ಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ಆಡಳಿತ ಶಕ್ತಿ ಕೇಂದ್ರವಾದ ಜಿಲ್ಲಾಡಳಿತ ಭವನದಲ್ಲಿರುವ ಶೌಚಾಲಯಗಳು ಇದ್ದರೂ ಇಲ್ಲದಂತಾಗಿದೆ, ಗ್ರಾಮೀಣ ಭಾಗದಿಂದ ನೂರಾರು ಜನರು ಸಮಸ್ಯೆಗಳನ್ನು ಹೊತ್ತುಕೊಂಡು ಇಲ್ಲಿಗೆ ಬರುತ್ತಾರೆ. ಸಮಸ್ಯೆ ಹೊತ್ತು ಬಂದ ಜನರಿಗೆ ಅಧಿಕಾರಿಗಳು ಸಭೆ, ಕಾರ್ಯಕ್ರಮ, ಅಧಿಕಾರಿಗಳ ನಡುವೆ ಚರ್ಚೆ ಎಂದು ಗಂಟೆಗಂಟಲೆ ಕಾಯಿಸುವ ವೇಳೆ ಸಾರ್ವಜನಿಕರು ತಮ್ಮ ನೈಸರ್ಗಿಕ ಬಾದೆ ತೀರಿಸಿಕೊಳ್ಳುವುದಕ್ಕೆ ಇಲ್ಲಿರುವ ಶೌಚಾಲಯದತ್ತ ಕಾಲಿಟ್ಟರೆ ಶೌಚಾಲಯದ ಅವ್ಯವಸ್ಥೆಯನ್ನು ಕಂಡು ಜಿಲ್ಲಾಡಳಿತಕ್ಕೆ ಛೀಮಾರಿ ಹಾಕುವಂತಾಗಿದೆ.
ಹೌದು. ಇಲ್ಲಿರುವ ಶೌಚಾಲಯಗಳನ್ನು ಬಳಸುವುದೇ ಕಷ್ಟವಾಗಿದ್ದೂ, ಪುರುಷರು ಬಳಸುವ ಕೆಲುವು ಶೌಚಾಲಯಗಳಲ್ಲಿ ನೀರಿನ ಪೈಪ್ ಕಿತ್ತು ಹೋಗಿದ್ದರೂ ಸರಿಪಡಿಸಿಲ್ಲ, ಶೌಚದಲ್ಲಿ ಒಂದು ಕ್ಷಣ ಅದರ ಒಳಗೆ ನಿಲ್ಲಲು ಸಾಧ್ಯವಾಗದಂತಹ ಸ್ಥಿತಿಯಲ್ಲಿ ಜನರು ಅನಿವಾರ್ಯವಾಗಿ ನೈಸರ್ಗಿಕ ಬಾಧೆಯನ್ನು ವಿಸರ್ಜಿಸಬೇಕಾದ ಪರಿಸ್ಥಿತಿ ಬಂದಿದೆ.
ಭವನದಲ್ಲಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಭಾಂಗಣದಲ್ಲಿರುವ ಶೌಚಾಲಯದಲ್ಲಿನ ಪುರುಷರ ಕೊಠಡಿಯಲ್ಲಿ ಟೈಲ್ಸ್ ಗಳು ಕಿತ್ತು ಹೋಗಿದ್ದರೇ, ಮೂರು ಅಂತಸ್ತಿನ ಬಿಲ್ಡಿಂಗ್ ಶೌಚಾಲಯಗಳಲ್ಲಿ ಮೂತ್ರ ವಿಸರ್ಜನೆಯ ಉಪಕರಣಗಳು ಮುರಿದು ಬಿದ್ದಿವೆ, ಅಲ್ಲದೇ ಮಲ ವಿಸರ್ಜನೆ ಮಾಡಲು ಹೋದರೆ ಸರಿಯಾದ ಸ್ವಚ್ಚತೆ ಇಲ್ಲಾ, ಶೌಚಾಲಯ ಉಪಯೋಗಿಸಿದ ಬಳಿಕ ಕೈ ತೊಳೆಯಲು ಸಿಂಕ್ ಬಳಿ ಬಂದರೆ ಅದರಲ್ಲಿ ನಳಗಳೇ ಇಲ್ಲಾ. ಇವುಗಳ ಬಗ್ಗೆ ಅಧಿಕಾರಿಗಳ ಗಮನಿಕಿದ್ದರೂ ಯಾವೊಬ್ಬರು ಅತ್ತ ಕಡೆ ಹೋಗುವುದಿಲ್ಲ.
- Advertisement -
ಜನರಿಗೆ ಸ್ವಚ್ಛದ ಬಗ್ಗೆ ನೀತಿ ಪಾಠವೇಳುವ ಜಿಲ್ಲಾಡಳಿತವೇ ಇಲ್ಲಿನ ಶೌಚಾಲಯಗಳನ್ನು ಸ್ವಚ್ಛವಾಗಿಟ್ಟುಕೊಳ್ಳದೇ ಊರ ಸ್ವಚ್ಛತೆಯನ್ನು ಹೇಗೆ ನಿರ್ವಹಿಸಲು ಸಾಧ್ಯವೆಂದು ಜನರು ಆಡಿಕೊಳ್ಳುತ್ತಿದ್ದಾರೆ.
ಜಿಲ್ಲಾ ಕೇಂದ್ರದ ಪ್ರಮುಖ ಆಡಳಿತ ಕಚೇರಿಯಲ್ಲೇ ಶೌಚಾಲಯಗಳು ಹೀಗಿರಬೇಕಾದರೆ, ತಾಲ್ಲೂಕು ಕೇಂದ್ರಗಳ ಕಚೇರಿಯಲ್ಲಿ ಹೇಗಿರಬಹುದೆಂಬುದನ್ನು ನೀವೇ ಊಹಿಸಿಕೊಳ್ಳಿ. ಇದರ ನಿರ್ವಹಣೆಗಾಗಿ ಪ್ರತಿ ವರ್ಷ ಲಕ್ಷಗಟ್ಟಲೇ ಹಣವನ್ನು ಮಿಸಲಿಡಲಾಗುತ್ತದೆ, ಆದರೆ ಇದರ ಅನುದಾನವನ್ನು ಬಳಕೆ ಮಾಡದೇ ಗುತ್ತಿಗೆದಾರನ ಜೇಬಿಗೆ ಬಿದ್ದೀರಬಹುದಾ ಎಂಬ ಅನುಮಾನ ಕಾಡತೊಡಗಿದೆ.
ಹಿರಿಯ ಅಧಿಕಾರಿಗಳ ಶೌಚಾಲಯ ಸ್ವಚ್ಛತೆ ಹಾಗೂ ಪ್ರತಿ ವರ್ಷ ನಿರ್ವಹಣೆ ಮಾಡಲಾಗುತ್ತದೆ, ಆದರೆ ಸಭಾಂಗಣದಲ್ಲಿನ ಶೌಚಾಲಯಗಳು ಹಲವು ವರ್ಷಗಳಿಂದ ನಿರ್ವಹಣೆ ಕಾಣದೇ ಸೊರಗಿದೆ. ಮಾದರಿಯಾಗಬೇಕಿದ್ದ ಜಿಲ್ಲಾಡಾಳಿತ ಭವನದಲ್ಲಿಯೇ ಶೌಚಾಲಯಗಳು ಅವ್ಯವಸ್ಥೆಯ ಆಗರವಾಗಿದ್ದೂ ದುರ್ದೈವೇ ಸರಿ.
ನಿತ್ಯದ ಕಚೇರಿ ವ್ಯವಹಾರಕ್ಕೆ ಆಗಮಿಸುವ ಗ್ರಾಮೀಣ ಜನತೆಗೆ ಇದರ ಗೋಳು ಹೇಳತೀರದಾಗಿದೆ. ಅಧಿಕಾರಿಗಳು ಕಣ್ಣಿದ್ದೂ ಕುರುಡರಾಗಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಈಗಲಾದರೂ ಎಚ್ಚೆತ್ತು ಸಾರ್ವಜನಿಕರಿಗೆ ಶೌಚಾಲಯಗಳ ಸಮರ್ಪಕ ವ್ಯವಸ್ಥೆ ಮಾಡುವಲ್ಲಿ ಮುಂದಾಗವರಾ ಎಂಬುದು ಕಾಲವೇ ಉತ್ತರಿಸಲಿದೆ.

