ಸತ್ಯಕಾಮ ವಾರ್ತೆ ಯಾದಗಿರಿ:
ಜಿಲ್ಲೆಯಾದ್ಯಂತ ಎಸ್.ಎಸ್.ಎಲ್. ಸಿ ಪರೀಕ್ಷೆ ಆರಂಭವಾಗಿದ್ದು, ಸೋಮವಾರ ನಡೆದ ಪ್ರಥಮ ಭಾಷೆ ಪರೀಕ್ಷೆಯಲ್ಲಿ ನಕಲು ಮಾಡಲು ಸಹಕರಿಸಿದ ಆರೋಪದ ಮೇರೆಗೆ ಇಬ್ಬರು ಸಹ ಶಿಕ್ಷಕರನ್ನು ಅಮಾನತ್ತುಗೊಳಿಸಿ ಡಿ.ಡಿ.ಪಿ.ಐ
ಮಂಜುನಾಥ ಎಚ್.ಟಿ. ಅವರು ಆದೇಶ ಹೊರಡಿಸಿದ್ದಾರೆ.
ಸುರಪುರ ತಾಲೂಕಿನ ಹುಣಸಗಿ ಸರಕಾರಿ ಪದವಿ ಪೂರ್ವ ಕಾಲೇಜು (ಬಾಲಕರ) ಮತ್ತು ಸುರಪುರ ಪದವಿ ಪೂರ್ವ ಕಾಲೇಜು (ಬಾಲಕರ) ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರದಲ್ಲಿ ಕ್ರಮವಾಗಿ ಸುರಪುರ ತಾಲೂಕಿನ ಏವೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಸಾಹೇಬಗೌಡ ಉಕ್ಕಾಲಿ ಮತ್ತು ಸುರಪುರ ತಾಲೂಕಿನ ಝಂಡದಕೇರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಹಣಮಂತ್ರಾಯ ಇವರು ಪರೀಕ್ಷಾ ಪಾವಿತ್ರ್ಯತೆ ಕಾಪಾಡಲು ವಿಫಲರಾದ ಕಾರಣ ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು-1957 ನಿಯಮ 10(1) ರನ್ವಯ ಅಮಾನತ್ತು ಮಾಡಲಾಗಿದೆ.
ಯಾದಗಿರಿ ಜಿಲ್ಲಾ ಪಂಚಾಯತ ಸಿ.ಇ.ಓ ಅವರು ವೆಬ್ ಕಾಸ್ಟಿಂಗ್ ಸಿ.ಸಿ. ಕ್ಯಾಮರಾ ವೀಕ್ಷಣೆ ಮಾಡಿದಾಗ ಹುಣಸಗಿ ಮತ್ತು ಸುರಪುರ ಈ ಪರೀಕ್ಷಾ ಕೇಂದ್ರದಲ್ಲಿ ನಕಲು ನಡೆಯುತ್ತಿದರು, ಕೊಠಡಿ ಮೇಲ್ವಿಚಾರಕರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಕೊಠಡಿ ಮೆಲ್ವಿಚಾರಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಡಿ.ಡಿ.ಪಿ.ಐ ಅವರಿಗೆ ಸೂಚಿಸಿದರು.
- Advertisement -
ನೌಕರರು ಕರ್ನಾಟಕ ನಾಗರಿಕ ಸೇವಾ ನಿಯಮ-98ರಂತೆ ಜೀವನಾಂಶ ಭತ್ಯೆ ಪಡೆಯಲು ಅರ್ಹರಿದ್ದು, ಸಕ್ಷಮ ಪ್ರಾಧಿಕಾರಿಯ ಲಿಖಿತ ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡತಕ್ಕದ್ದಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

