*ಕೆಬಿಜೆಎನ್‌ಎಲ್ ಕಚೇರಿ ಮುಂದೆ ನೀರಿಗಾಗಿ ಪ್ರತಿಭಟನೆ*
ರೈತರೊಂದಿಗೆ ಮಾತನಾಡದೆ ಹೊರಟು ಹೋದ ಜಿಲ್ಲಾಧಿಕಾರಿ
*ಜಿಲ್ಲಾಧಿಕಾರಿ ನಡೆಗೆ ಆಕ್ರೋಶಗೊಂಡ ರೈತರು ತಹಶೀಲ್ದಾರ್‌ಗೆ ಘೇರಾವ:*
- Advertisement -
*ರೈತರ ಕಣ್ಣೀರು, ನಿಟ್ಟುಸಿರು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ: ಸತ್ಯಂಪೇಟೆ*
*ಸತ್ಯಕಾಮ ವಾರ್ತೆ ಶಹಾಪುರ:*
ರೈತರು ಬೆಳೆದ ಕೋಟ್ಯಾಂತರ ರೂಪಾಯಿ ಮೌಲ್ಯದ ಮೆಣಸಿನಕಾಯಿ ಬೆಳೆ ದಿನಗಳೆದಂತೆ ಕಮರುತಿದ್ದು, ಈ ಕುರಿತು ರೈತ ಸಂಘದ ಹೋರಾಟ 22ನೇ ದಿನಕ್ಕೆ ಕಾಲಿಟ್ಟರು ಸರ್ಕಾರ ಹೋರಾಟವನ್ನು ಹಗುರವಾಗಿ ತೆಗೆದುಕೊಂಡಿದ್ದು, ರೈತರ ಸಹನೆ ಕಟ್ಟೆಯೊಡೆದು ಹೋಗಿದ್ದು ಶುಕ್ರವಾರ ರೈತರು ಮಾಡು ಇಲ್ಲವೇ ಮಡಿ ಎನ್ನುವ ಸ್ಥಿತಿಗೆ ಮುಟ್ಟಿತ್ತು. ಆಳುವ ಸರ್ಕಾರ ನಮ್ಮ ಪಾಲಿಗೆ ಸತ್ತು ಹೋಗಿದೆ, ಬೆಳೆಗೆ ನೀರು ಬಿಡಿ ಎಂದರು ಮುಖ್ಯಮಂತ್ರಿಯಿಂದ ತಹಶೀಲ್ದಾರರವರೆಗೆ ಹಾರಿಕೆ ಉತ್ತರಗಳು ಬರುತ್ತಿವೆ, ರೈತರ ಕಣ್ಣೀರು, ನಿಟ್ಟುಸಿರು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲವೆಂದು, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.
ಸಮೀಪದ ಭೀಮರಾಯನಗುಡಿ ಕೆಬಿಜೆಎನ್‌ಎಲ್ ಆಡಳಿತ ಕಚೇರಿ ಎದುರು ಶುಕ್ರವಾರ ಬೆಳಗ್ಗೆ ಪ್ರಾರಂಭವಾದ ಹೋರಾಟದಲ್ಲಿ ಜಿಲ್ಲಾಧಿಕಾರಿಗಳು ಪಾಲ್ಗೊಂಡು, ಸರ್ಕಾರದ ನಿರ್ಧಾರ ತಿಳಿಸುವ ಬಗ್ಗೆ ಕಾಯುವಂತೆ ತಿಳಿಸಿ, ರೈತರನ್ನು ಕೂಡಿಸಿ ತಾವು ಹೇಳದ ಕೇಳದೆ ಹೊರಟು ಹೋದದ್ದು, ಇದೆಂಥ ನ್ಯಾಯ? ರೈತರ ನೋವು ಹತಾಶೆ, ಸಂಕಟ ಅರ್ಥವಾಗದಿರುವುದು ಎಂತಹ ವಿಪರ್ಯಾಸ? ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲೇ ಹನುಮಂತ ತಂದೆ ಮಾನಪ್ಪ ಪೂಜಾರಿ ಮದ್ರಿಕಿ ವಿಷ ಸೇವಿಸಲು ಪ್ರಯತ್ನಿಸಿದ್ದು ಕ್ಷಣದಲ್ಲಿ ದುರಂತ ತಪ್ಪಿದೆ, ಇಷ್ಟಾದರೂ ಸರಕಾರ ರೈತರ ಸ್ಥಿತಿಯ ಗಂಭೀರ ಅರಿತುಕೊಳ್ಳುತ್ತಿಲ್ಲವೆಂದು ಆರೋಪಿಸಿದರು.
ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರು ಮುಖ್ಯಮಂತ್ರಿಗಳಿಗೆ ಮಾತನಾಡಿದ್ದು, ನೀರಾವರಿ ಎಮ್.ಡಿ ಅವರಿಂದ ಸಲಹೆ ಪಡೆದಿದ್ದು, ನೀರಾವರಿ ಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂಬ ಭರವಸೆಯು ರೈತರ ಪ್ರತಿಭಟನೆಯ ಕಾವು ಸ್ವಲ್ಪ ತಣ್ಣಗಾಗಿತ್ತು.
ಆದರೆ ಸಂಜೆಯಾಗುತ್ತಲೇ ಎಲ್ಲಾ ಅಧಿಕಾರಿಗಳು ಉತ್ತರ ನೀಡದೆ ಹೋಗಿದ್ದು, ರೈತರ ಸಹನೆ ಕೆಣಕಿದ್ದು, ತಹಶೀಲ್ದಾರರಲ್ಲಿ ಘೇರಾವು ಹಾಕಿ ಪ್ರತಿಭಟಿಸಿದರು, ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಪೋಲಿಸರ ಮನವರಿಕೆಯಿಂದ ಸ್ವಲ್ಪಮಟ್ಟಿಗೆ ಶಾಂತವಾಯಿತು.
- Advertisement -
*ಸರ್ಕಾರದ ಹಠ ಸರಿಯಲ್ಲ:* 22 ದಿನಗಳಿಂದ ಪ್ರತಿಭಟನೆ ನಡೆದರೂ ಸರ್ಕಾರದ ಮೊಂಡತನ ರೈತರ ಬದುಕಿಗೆ ಸಂಕಟ ತಂದಿದೆ, ಲಕ್ಷಾಂತರ ರೂ ಮೆಣಸಿನಕಾಯಿ ಬೆಳೆ ಹಾಳಾಗುತ್ತಿದ್ದು, ರೈತರನ್ನು ರೊಚ್ಚಿಗೇಳಿಸುತ್ತಿದೆ, ಇನ್ನಾದರೂ ಸಕಾರಾತ್ಮಕ ನಿಲುವು ತೆಗೆದುಕೊಂಡು ರೈತರ ನೆರವಿಗೆ ಸರ್ಕಾರ ಬರಬೇಕಾಗಿದೆ.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಶರಣು ಮಂದ್ರವಾಡ, ನಾಗರತ್ನ ಪಾಟೀಲ್, ಮಲ್ಲಣ್ಣ ಪರಿವಾಣ, ಮಹೇಶ ಸುಬೇದಾರ ಸೇರಿದಂತೆ ನೂರಾರು ರೈತರು ಇದ್ದರು.

