ಗುರುತಿನ ಚೀಟಿ ಧರಿಸಿ ಕರ್ತವ್ಯ ನಿರ್ವಹಿಸಲು ಅಧಿಕಾರಿ/ಸಿಬ್ಬಂದಿಗಳ ದಿವ್ಯ ನಿರ್ಲಕ್ಷ್ಯ
ವರದಿ:ಕುದಾನ್ ಸಾಬ್
ಯಾದಗಿರಿ: ಜಿಲ್ಲೆಯ ವಡಗೇರ ತಾಲ್ಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಯಾವೊಬ್ಬ ಸಿಬ್ಬಂದಿಯೂ ಕಚೇರಿಯ ಕರ್ತವ್ಯಯವಧಿಯಲ್ಲಿ ಸಿಬ್ಬಂದಿಯ ಗುರುತಿನ ಚೀಟಿ ಧರಿಸದೇ ಸರ್ಕಾರದ ಆದೇಶ ಉಲ್ಲಂಘನೆ ಮಾಡುತ್ತಿರುವುದು ನಡೆಯುತ್ತಿದೆ.
ಈ ಕುರಿತು ಪತ್ರಿಕೆ ರಿಯಾಲಿಟಿ ಚೆಕ್ ಮಾಡಿದಾಗ ಈ ಸಂಗತಿ ಬೆಳಕಿಗೆ ಬಂದಿದೆ. ಐಡಿ ಕಾರ್ಡ್ ಬಗ್ಗೆ ಸಿಬ್ಬಂದಿಯವರಿಗೆ ಕೇಳಿದರೆ, ಟ್ಯಾಗ್ ಇಲ್ಲಾ, ಐಡಿ ಕಾರ್ಡ್ ಕೊಟ್ಟಿಲ್ಲ ಎಂಬ ಸಬೂಬುಗಳ ಕಥೆ ಕಟ್ಟುತ್ತಾರೆ ಹೊರತು ಅದನ್ನು ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತಂದು ಐಡಿ ಕಾರ್ಡ್ ತೆಗೆದುಕೊಳ್ಳುವ ಕನಿಷ್ಠ ಸೌಜನ್ಯವು ಇವರಿಗಿಲ್ಲ,
- Advertisement -
ಮೊದಲೇ ಹೊಸ ತಾಲ್ಲೂಕು ಆಗಿದ್ದು, ಅಲ್ಲದೇ ತೀರ ಹಿಂದುಳಿದ ಭಾಗವಾಗಿರುವುದರಿಂದ ಯಾವುದೇ ಜಿಲ್ಲಾ ಇಲ್ಲವೇ ರಾಜ್ಯಮಟ್ಟದ ಅಧಿಕಾರಿಗಳು ಇಲ್ಲವೇ ಪ್ರಮುಖರು ಬರುವ ಸಾಧ್ಯತೆಯೂ ಇಲ್ಲದಿರುವುದರಿಂದ ಸಿಬ್ಬಂದಿಗೆ ಕಾನೂನು ಪಾಲನೆ ಮಾಡಬೇಕು ಎಂಬುದರ ಬಗ್ಗೆ ಎಳ್ಳಷ್ಟು ಚಿಂತೆ ಇಲ್ಲದಿರುವುದು ಕಂಡುಬಂತು.
ಈಗಾಗಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು 16.03.2021 ರಂದು ಈ ಕುರಿತು ಸ್ಪಷ್ಟ ಆದೇಶ (ಸಂಖ್ಯೆ: ಸಿ.ಆ.ಸು.ಇ 12 ಕತವ 2021) ಹೊರಿಡಿಸಿದ್ದು, ಇಲಾಖೆ ನೌಕರರು ಅಧಿಕಾರಿಗಳು ತಮ್ಮ ತಮ್ಮ ಹೆಸರಿನ ಹುದ್ದೆಯ ಗುರುತಿನ ಚೀಟಿ ಕಡ್ಡಾಯವಾಗಿ ಧರಿಸಬೇಕೆಂಬ ಸುತ್ತೋಲೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಕಳಿಸಿಕೊಟ್ಟಿದ್ದು ಇರುತ್ತದೆ. ಇದರ ಪ್ರಕಾರ ಎಲ್ಲ ಸರ್ಕಾರಿ ನೌಕರರು, ನಿಗಮಗಳ ನೌಕರರುಗಳಿಗೆ ಇದು ಅನ್ವಯವಾಗುತ್ತದೆ.
ಆದರೆ ವಡಗೇರಾ ತಾಲ್ಲೂಕಿನಲ್ಲಿ ಇದರ ಪಾಲನೆ ಮಾತ್ರ ಆಗುತ್ತಿಲ್ಲ ಎಂಬುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಈ ಕುರಿತು ತಹಸೀಲ್ದಾರ ಶ್ರೀನಿವಾಸ ಚಾಪಲ್ ರನ್ನು ವಿಚಾರಿಸಿದರೆ ಈ ಬಗ್ಗೆ ಐಡಿ ಕಾರ್ಡ್ ಹಾಕಿಕೊಂಡು ಕುಳಿತುಕೊಳ್ಳಬೇಕೆಂದು ಏನಾದರು ಇದೆಯಾ, ಆ ರೀತಿ ನಿಯಮವೇನು ಇಲ್ಲಾ ಎಂದು ಪತ್ರಿಕೆಗೆ ನಿರ್ಲಕ್ಷ್ಯದಿಂದ ಪ್ರತಿಕ್ರಿಯಿಸಿದರು.
ಹೀಗಾಗಿ ತಾಲ್ಲೂಕಿನಲ್ಲಿ ಮುಖ್ಯಸ್ಥರೇ ಹೀಗೆ ಅರೆ ಪ್ರಜ್ಞಾವಸ್ಥೆಯಲ್ಲಿದ್ದರೆ ಇನ್ನು ಸಿಬ್ಬಂದಿಯವರ ಕಥೆ ಹೇಗಿರಬೇಡ? ಇದನ್ನಂತೂ ಹೇಳಲು ಬಾರದು, ಗ್ರಾಮೀಣ ಪ್ರದೇಶದಲ್ಲಿ ಒಂದು ಜನಪದರ ಗಾದೆ ಚಾಲ್ತಿಯಲ್ಲಿದೆ ಅದೇನೆಂದರೆ ಶಾಲೆಲಿ ಮಾಸ್ತರ ನಿಂತು ಸೂಸೂ ಮಾಡಿದರೆ ಮಕ್ಕಳು ಓಡಾಡಿ ಮಾಡಿದರು ಎಂಬ ಮಾತಿದೆ.
ಹೀಗೆಯೇ ಜಿಲ್ಲೆಯಲ್ಲಿಯೂ ಸಹ ಹೆಚ್ಚು ಕಡಿಮೆ ಇದೇ ಪರಿಸ್ಥಿತಿ ಇದ್ದು, ಪ್ರಮುಖ ಸ್ಥಾನದಲ್ಲಿರುವ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಜ್ಞಾನ ಇಲ್ಲದಿದ್ದರೆ ಸಿಬ್ಬಂದಿಯವರಂತೂ ಇನ್ನು ಅಧ್ವಾನವಾಗಿ ವರ್ತಿಸುವುದು ಸರ್ವೆ ಸಾಮಾನ್ಯ. ಎಷ್ಟೋ ಕಚೇರಿಯಲ್ಲಿ ಸರ್ಕಾರದ ಸುತ್ತೋಲೆ ಸೂಚನೆ ಆದೇಶಗಳು ಇರಲಿ ಹೈಕೋರ್ಟ್ ಸುಪ್ರಿಂ ಕೋರ್ಟ್ ಆದೇಶಗಳನ್ನೇ ಪಾಲಿಸದೇ ಜಾಣ ಕುರುಡು ಇಲ್ಲವೇ ಮೈಗಳ್ಳ ಕುರುಡು ಇಲ್ಲವೇ ಅಸಡ್ಡೆ ಕುರುಡು/ಕಿವುಡು ಅನುಸರಿಸುತ್ತಿರುವುದರಿಂದ ಶ್ರೀಸಾಮಾನ್ಯರಿಂದ ಹಿಡಿದು ಜಿಲ್ಲೆ ರಾಜ್ಯದ ಏಳ್ಗೆಯೂ ಕನಸೇ? ಎಂಬ ಪ್ರಶ್ನೆ ಉದ್ಭವಿಸುತ್ತಿದೆ ಎಂಬುದಂತೂ ಸುಳ್ಳಲ್ಲ.
- Advertisement -

