ವರದಿ: ಕುದಾನ್ ಸಾಬ್
ಯಾದಗಿರಿ: ಜನಸಾಮಾನ್ಯರಿಗೆ ಒಂದು ಕಾನೂನು, ಸರ್ಕಾರಿ ಅಧಿಕಾರಿಗಳಿಗೆ ಮತ್ತೊಂದು ಕಾನೂನು ಎನ್ನುವ ಪ್ರಶ್ನೆ ಇದೀಗ ಜಿಲ್ಲೆಯಲ್ಲಿ ಉದ್ಭವಿಸಿದೆ. ವಿಮೆ ಮಾಡಿಸಿ ಅಂತ ಸಾರ್ವಜನಿಕರಿಗೆ ತಿಳಿಹೇಳುವ ಸರ್ಕಾರಿ ಅಧಿಕಾರಿಗಳೇ ತಾವು ಕಾರ್ಯನಿರ್ವಹಿಸುತ್ತಿರುವ ಇಲಾಖೆಯ ವಾಹನಗಳಿಗೆ ವಿಮೆ ಮಾಡಿಸದೇ ನಿರ್ಲಕ್ಷ ತೋರುತ್ತಿದ್ದಾರೆ.
ಜನಸಾಮಾನ್ಯರಿಗಾದ್ರೆ ಹೆಲ್ಮೆಟ್ ಇಲ್ಲ. ಸೀಟ್ ಬೆಲ್ಟ್ ಹಾಕಿಲ್ಲ. ಇನ್ಸುರೆನ್ಸ್ ಇಲ್ಲ, ಎಮಿಷನ್ ಟೆಸ್ಟ್ ಇಲ್ಲ, ಮಿರರ್ ಇಲ್ಲ ಅದಿಲ್ಲ-ಇದಿಲ್ಲ ಅಂತೆಲ್ಲಾ ಪೊಲೀಸರು ಕೇಸ್ ಮೇಲೆ ಕೇಸ್ ಹಾಕಿ ಜನ ಸಾಮಾನ್ಯರ ಬಳಿ ದಂಡದ ರೂಪದಲ್ಲಿ ಪೊಲೀಸರು ಸಾವಿರಾರು ರೂಪಾಯಿ ಹಣ ವಸೂಲಿ ಮಾಡ್ತಾರೆ. ಆದರೆ, ಯಾದಗಿರಿ ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಹಲವು ಸರ್ಕಾರಿ ವಾಹನಗಳ ಇನ್ಸೂರೆನ್ಸ್ ಮುಗಿದು ಹಲವು ವರ್ಷಗಳೇ ಕಳೆದರೂ ಅಂತಹ ಅಧಿಕಾರಿಗಳ ವಿರುದ್ದ ಆರ್. ಟಿ. ಓ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಮೌನವಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿರುವ ಹಲವು ಸರ್ಕಾರಿ ವಾಹನಗಳು ವಿಮೆರಹಿತವಾಗಿದ್ದೂ, ಪಶು ಸಂಗೋಪನಾ ಇಲಾಖೆಯ ವಾಹನದ ಇನ್ಶೂರೆನ್ಸ್ ಮುಗಿದು ಒಂದೆರಡು ತಿಂಗಳಲ್ಲ ಬರೋಬ್ಬರಿ ಹನ್ನೆರಡು ವರ್ಷವಾಗಿದೆ. ಪೊಲೀಸ್ ಇಲಾಖೆಯ ಹಲವು ವಾಹನಗಳಿಗೆ ನಾಲ್ಕೈದು ವರ್ಷಗಳ ಹಿಂದೆಯೇ ಇನ್ಶೂರೆನ್ಸ್ ಮುಗಿದಿದೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಳಸುತ್ತಿರುವ ವಾಹನದ ಇನ್ಶೂರೆನ್ಸ್ ಎರಡು ವರ್ಷಗಳ ಹಿಂದೆಯೇ ಮುಗಿದಿದೆ. ಇನ್ನೂ ಹಲವು ಇಲಾಖೆಯ ಅದೆಷ್ಟೋ ಸರ್ಕಾರಿ ವಾಹನಗಳಿಗೆ ಇದುವರೆಗೂ ವಿಮೆ ಮಾಡಿಸಿಲ್ಲ. ಹೀಗಾಗಿ ಸಾರ್ವಜನಿಕರು ಕಾನೂನು ಪಾಲಿಸಿ ಸಾರ್ವಜನಿಕರಿಗೆ ಮಾದರಿಯಾಗಿರಬೇಕಿದ್ದ ಅಧಿಕಾರಿಗಳೇ ಕಾನೂನು ಉಲ್ಲಂಘಿಸುತ್ತಿದ್ದು ಬೆಕ್ಕಿನ ಕೊರಳಿಗೆ ಘಂಟೆ ಕಟ್ಟುವವರು ಯಾರು ಎಂದು ಸರ್ಕಾರಕ್ಕೆ ಪ್ರಶ್ನಿಸುವಂತಾಗಿದೆ.
- Advertisement -
ವಾಹನಗಳ ತಪಾಸಣೆಗಾಗಿ ದಾರಿಯುದ್ಧಕ್ಕೂ ನಿಲ್ಲುವ ಅಧಿಕಾರಿಗಳು ಜನಸಾಮಾನ್ಯರ ವಾಹನಗಳ ದಾಖಲೆ ಕೇಳುವುದಕ್ಕೂ ಮೊದಲು, ಸರ್ಕಾರಿ ವಾಹನಗಳ ದಾಖಲೆಗಳನ್ನು ಪರಿಶೀಲಿಸಿ ಸರ್ಕಾರಿ ಅಧಿಕಾರಿಗಳ ನಿಯಮ ಉಲ್ಲಂಘನೆಗೆ ಬ್ರೇಕ್ ಹಾಕಬಹುದಿತ್ತಲ್ಲವೇ ಎಂಬ ಪ್ರಶ್ನೆ ಜಿಲ್ಲೆಯ ಜನಸಾಮಾನ್ಯರಲ್ಲಿ ಮೂಡಿದೆ.
ಒಟ್ಟಿನಲ್ಲಿ ಸರ್ಕಾರಿ ವಾಹನಗಳಿಗೆ ಇನ್ಸುರೆನ್ಸ್ ತುಂಬುವ ಮೂಲಕ ಜವಾಬ್ದಾರಿ ಮೆರೆಯಬೇಕಾಗಿದ್ದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದ್ದು. ಸಾರ್ವಜನಿಕರು ಕೂಡ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುವಂತಾಗಿದೆ. ಇನ್ನಾದ್ರೂ ಆರ್.ಟಿ.ಓ ಅಧಿಕಾರಿಗಳು ಎಚ್ಚೆತ್ತುಕೊಂಡು ಸರ್ಕಾರಿ ವಾಹನಗಳಿಗೆ ವಿಮೆ ಮಾಡಿಸುವ ಎಚ್ಚರಿಕೆ ನೀಡುವ ಮೂಲಕ ನಿಯಮ ಉಲ್ಲಂಘಿಸುತ್ತಿರುವ
ಅಧಿಕಾರಿಗಳಿಗೆ ಬ್ರೇಕ್ ಹಾಕುತ್ತಾರೋ ಇಲ್ಲವೋ ಅನ್ನುವುದನ್ನು ಕಾದು ನೋಡಬೇಕಾಗಿದೆ.
ಸತ್ಯಕಾಮ ರಿಯಾಲಿಟಿ ಚೆಕ್ ನಲ್ಲಿ ಕಂಡುಬಂದ ಇನ್ಶೂರೆನ್ಸ್ ಇಲ್ಲದ ವಾಹನಗಳು
ಕೆಎ33ಜಿ0264
ಕೆಎ33ಜಿ8008
ಕೆಎ33ಜಿ0108
ಕೆಎ33ಜಿ0182
ಕೆಎ33ಜಿ0184
ಕೆಎ33ಜಿ0134
ಕೆಎ33ಜಿ0252
ಕೆಎ33ಜಿ0067
ಕೆಎ33ಜಿ0104 ಇದಲ್ಲದೇ ಇನ್ನೂ ಹಲವು ಇಲಾಖೆಯಲ್ಲಿನ ವಾಹನಗಳ ಇನ್ಶೂರೆನ್ಸ್ ಮುಗಿದೂ ಹಲವು ವರ್ಷಗಳಾಗಿವೆ.

