*ಕಣ್ಮುಚ್ಚಿ ಕುಳಿತ ಸಾರಿಗೆ ಮತ್ತು ಪೊಲೀಸ್ ಅಧಿಕಾರಿಗಳು*
*ಸುಪ್ರೀಂಕೋರ್ಟ್ ಆದೇಶಕ್ಕೂ ಇಲ್ಲಿಲ್ಲ ಕವಡೆ ಕಾಸಿನ ಕಿಮ್ಮತ್ತು*
*ವರದಿ:ಕುದಾನ್ ಸಾಬ್*
*ಸತ್ಯಕಾಮ ವಾರ್ತೆ ಯಾದಗಿರಿ :*
ವಾಹನಗಳಿಗೆ ಕೂಲಿಂಗ್ ಪೇಪರ್ ಹಾಕಿಕೊಂಡು ಖಾಸಗಿ ವಾಹನಗಳು ತಿರುಗಾಡುವುದು ಅಂತಹ ದೊಡ್ಡ ವಿಷಯವೇನಲ್ಲವೆಂದರೂ ಸಹ ಅದು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯೇ ಆಗಿದೆ.ಆದರೆ ಜಿಲ್ಲೆಯಲ್ಲಿ ಸರ್ಕಾರಿ ಇಲಾಖೆಯ ಅನೇಕ ವಾಹನಗಳೇ ಸುಪ್ರಿಂ ಆದೇಶ ಧಿಕ್ಕರಿಸಿ ಕಪ್ಪು ಬಣ್ಣದ ಪೇಪರ್ ಹಾಕಿಕೊಂಡು ರಾಜಾರೋಷವಾಗಿ ತಿರುಗುತ್ತಿರುವುದು ಸೋಜಿಗ ಮೂಡಿಸಿದೆ.
ಹೌದು ಸುಪ್ರಿಂ ಕೋರ್ಟ್ ಆದೇಶ ಉಲ್ಲಂಘಿಸುವ ಮೂಲಕ ಅಂಧಾ ದರ್ಬಾರ್ ನಡೆಸುತ್ತಿರುವುದಕ್ಕೆ ಹತ್ತು ಹಲವು ಉದಾಹರಣೆಗಳು ನಿತ್ಯ ಕಂಡು ಸಿಗುತ್ತವೆ ಇವುಗಳ ಪೈಕಿ ಕಪ್ಪು ಪರದೆ ಅಳವಡಿಸಿಕೊಂಡು ತಿರುಗುವ ವಾಹನಗಳು ಅದರಲ್ಲೂ ಸರ್ಕಾರಿ ವಾಹನಗಳ ತಿರುಗುವುದು ಜಿಲ್ಲೆಯಲ್ಲಿ ಸರ್ವೇ ಸಾಮಾನ್ಯವಾಗಿರುವುದು ತಾಜಾ ಉದಾಹರಣೆ ಇಲ್ಲಿದೆ ನೋಡಿ,
- Advertisement -
ಕಾನೂನು ಕಾಪಾಡಬೇಕಾದ ಅಧಿಕಾರಿಗಳು ತಮ್ಮ ಸರ್ಕಾರಿ ಕಾರಿಗೆ ಕಪ್ಪು ಪರದೆ (ಕೂಲಿಂಗ್ ಪೇಪರ್) ಹಾಕಿಕೊಂಡಿರುವ ಪ್ರಕರಣಗಳು ಪತ್ರಿಕೆ ಕ್ಯಾಮೆರಾ ಕಣ್ಣಿಗೆ ಸಿಕ್ಕಿದವು.
ಜಿಲ್ಲೆಯಲ್ಲಿ ಕೆಲ ಸರ್ಕಾರಿ ಅಧಿಕಾರಿಗಳು ತಾವು ಬಳಸುವ ಇಲಾಖೆ ಕಾರುಗಳಿಗೆ ಇಂತಹ ಕಪ್ಪು ಪರದೆ ಟಿಂಟೆಡ್ ಗ್ಲಾಸ್ ಅಳವಡಿಸಿರುವುದು ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಸುಪ್ರಿಂ ಆದೇಶ ಮತ್ತು ಸರ್ಕಾರದ ಸುತ್ತೋಲೆಗಳ ನಿಯಮದ ಪ್ರಕಾರ ಕಾರಿನ ವಿಂಡೋಗೆ ಟಿಂಟೆಡ್ ಗ್ಲಾಸ್ ಹಾಕುವಂತಿಲ್ಲ. ಟಿಂಟೆಡ್ ಗ್ಲಾಸ್‌ಅನ್ನು ಹಾಕಿಕೊಂಡು ತಿರುಗಾಡುವುದು ನಿಯಮಕ್ಕೆ ವಿರುದ್ಧವಾದುದು. ಆದಾಗ್ಯೂ ಕೆಲ ಸರ್ಕಾರಿ ಕಾರುಗಳಿಗೆ ಈ ರೀತಿಯ ಗ್ಲಾಸ್ ಬಳಕೆ ಆಗುತ್ತಿದೆ.
ಶೇ. 70 ರಷ್ಟು ಪಾರದರ್ಶಕವಾಗಿರಬೇಕು ಎಂಬ ನಿಯಮವನ್ನು ಅಧಿಕಾರಿಗಳ ಕಾರುಗಳೇ ಸ್ಪಷ್ಟವಾಗಿ ಉಲ್ಲಂಘನೆ ಮಾಡಿ ತಿರುಗುತ್ತಿದ್ದರೂ ಕ್ಯಾರೆ ಎನ್ನುವವರಿಲ್ಲ. ಕೆಎ 33 ಎಂ 3090 ನಂಬರಿನ ವಾಹನ ಹಾಗೂ ಅರಣ್ಯ ಇಲಾಖೆಯ ಕೆಎ 04 ಜಿ 1879 ವಾಹನಗಳು ಕಾನೂನು ನಿಯಮಗಳನ್ನು ಉಲ್ಲಂಘಿಸಿದ್ದು ಪತ್ರಿಕೆ ಕ್ಯಾಮೆರಾ ಕಣ್ಣಿಗೆ ಕಂಡುಬಂತು.
ಈ ಇಲಾಖೆಗಳ ಅಧಿಕಾರಿಗಳೇ ಸ್ವತಃ ಕಾರುಗಳಲ್ಲಿ ರಾಜಾರೋಷವಾಗಿ ಓಡಾಡುತ್ತಿರುವುದನ್ನು ನೋಡಿ ನಾಗರಿಕರು “ಏನು ಮಾಡೊಕ್ಕಾಗೊದಿಲ್ಲ” ಎಂದುಕೊಳ್ಳುತ್ತಾ ಮುಂದಕ್ಕೆ ಹೋಗುತ್ತಿರುವುದು ಕಂಡುಬಂತು.
- Advertisement -
ಸಾಮಾನ್ಯ ಜನರು ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದರೆ ದಂಡ ಹಾಕುವ ಆರ್‌ಟಿಒ ಅಧಿಕಾರಿಗಳು, ಮತ್ತು ಪೋಲಿಸ್ ಇಲಾಖೆಯ ಸಿಬ್ಬಂದಿಗಳು, ಸುಪ್ರೀಂ ಆದೇಶ ಉಲ್ಲಂಘನೆ ಮಾಡಿ ಕೂಲಿಂಗ್ ಟಿಂಟ್ ಅಳವಡಿಸಿರುವ ಕಾರು ಬಳಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಯಾಕೆ ಕೈಗೊಳ್ಳುತ್ತಿಲ್ಲ ಸುಪ್ರಿಂ ಕೋರ್ಟ್ ಆದೇಶವೂ ಈ ಅಧಿಕಾರಿಗಳಿಗೂ ಗೊತ್ತಿಲ್ಲವೋ ಅಥವಾ ಏನು ಮಾಡಿದರೂ ನಡೆಯುತ್ತದೆ ಎಂಬ ಅಸಡ್ಡೆಯೋ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

