ನವದೆಹಲಿ: ಲೋಕಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಕರ್ನಾಟಕದ ೨೮ ಲೋಕಸಭೆ ಕ್ಷೇತ್ರಗಳ ಪೈಕಿ ೨೦ ಕ್ಷೇತ್ರಗಳಿಗೆ ಟಿಕೆಟ್ ಪ್ರಕಟಿಸಲಾಗಿದೆ. ಕೆಲ ಹಾಲಿ ಸಂಸದರಿಗೆ ಕೊಕ್ ಕೊಡಲಾಗಿದೆ. ಹೊಸಬರಿಗೆ ಅವಕಾಶ ನೀಡಲಾಗಿದೆ. ವಿರೋಧದ ನಡುವೆಯೂ ಕೆಲವರಿಗೆ ಮಣೆ ಹಾಕಲಾಗಿದ್ದು, ಬಿಜೆಪಿ ಸದಸ್ಯತ್ವ ಪಡೆಯದೇ ಇರುವ ಡಾ. ಮಂಜುನಾಥ್ ಅವರಿಗೂ ಟಿಕೆಟ್ ಪ್ರಕಟಿಸಲಾಗಿದ್ದು, ಕಲಬುರಗಿಯಿಂದ ಉಮೇಶ್ ಜಾಧವ್ ಮತ್ತೆ ಕಣಕ್ಕಿಳಿದಿದ್ದಾರೆ.
೨೦೧೯ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಉಮೇಶ್ ಜಾಧವ್ ವಿರುದ್ಧ ೯೫,೪೫೨ ಮತಗಳಿಂದ ಖರ್ಗೆ ಅವರನ್ನು ಸೋಲಿಸಿದ್ದರು. “ಸೋಲಿಲ್ಲದ ಸರದಾರ” ಎಂದು ಜನಪ್ರಿಯವಾಗಿ ಕರೆಯಲ್ಪಡುವ (ಸೋಲದ ನಾಯಕ), ಇದು ಹಲವಾರು ದಶಕಗಳ ಕಾಲದ ಖರ್ಗೆಯವರ ರಾಜಕೀಯ ಜೀವನದಲ್ಲಿ ಮೊದಲ ಚುನಾವಣಾ ಸೋಲಾಗಿದ್ದುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಕಟೀಲ್, ಪ್ರತಾಪ್, ಡಿವಿಎಸ್ಗೆ ಕೊಕ್: ೨೦ ಕ್ಷೇತ್ರಗಳ ಪೈಕಿ ೯ ಜನ ಹಾಲಿ ಸಂಸದರಿಗೆ ಟಿಕೆಟ್ ಕೈತಪ್ಪಿದೆ. ಇದರಲ್ಲಿ ಚಾಮರಾಜನಗರದ ವಿ ಶ್ರೀನಿವಾಸ್ ಪ್ರಸಾದ್, ತುಮಕೂರಿನ ಎಲ್ ಬಸವರಾಜ್, ಹಾವೇರಿ ಶಿವಕುಮಾರ್ ಉದಾಸಿ ಈ ಹಿಂದೆ ಸ್ಪರ್ಧೆ ಮಾಡುವುದಿಲ್ಲವೆಂದು ಘೋಷಿಸಿದ್ದರು. ಅದರಂತೆಯೇ ಈ ಕ್ಷೇತ್ರಗಳಿಗೆ ಹೊಸಬರಿಗೆ ಮಣೆ ಹಾಕಲಾಗಿದೆ. ಹಾವೇರಿ ಕ್ಷೇತ್ರದಲ್ಲಿ ತಮ್ಮ ಪುತ್ರನಿಗೆ ಟಿಕೆಟ್ ನಿರೀಕ್ಷೆಯಲ್ಲಿದ್ದ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರಿಗೆ ನಿರಾಸೆ ಉಂಟಾಗಿದೆ. ಈ ಕ್ಷೇತ್ರದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಕಣಕ್ಕೆ ಇಳಿಸಲಾಗಿದೆ.
ಮತ್ತೊಂದೆಡೆ ತುಮಕೂರಿನಲ್ಲಿ ಹಿರಿಯ ನಾಯಕ ವಿ ಸೋಮಣ್ಣ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಮಣ್ಣ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ ಸೋತಿದ್ದರು. ನಿರೀಕ್ಷೆಯಂತೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಮೈಸೂರು ಸಂಸದ ಪ್ರತಾಪ್ ಸಿಂಹ, ಬೆಂಗಳೂರು ಉತ್ತರ ಕ್ಷೇತ್ರದ ಡಿ.ವಿ. ಸದಾನಂದ ಗೌಡ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಮೈಸೂರಿನಲ್ಲಿ ಪ್ರತಾಪ್ ಸಿಂಹ ಬದಲಿಗೆ ಯದುವೀರ್ ಒಡೆಯರ್ ಅವರಿಗೆ ಅವಕಾಶ ನೀಡಲಾಗಿದೆ.
ಇದೇ ವೇಳೆ ವಿರೋಧದ ನಡುವೆಯೂ ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್ ಕುಟುಂಬಕ್ಕೆ ಟಿಕೆಟ್ ನೀಡಲಾಗಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬಾರಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಅವರನ್ನು ಕಣಕ್ಕೆ ಇಳಿಸಲಾಗಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಟಿಕೆಟ್ ನೀಡಲಾಗಿದೆ. ದಕ್ಷಿಣ ಕನ್ನಡ ಕ್ಷೇತ್ರದಿಂದ ಕಟೀಲ್ ಬದಲಿಗೆ ಬ್ರಿಜೇಶ್ ಚೌಟ ಅವರಿಗೆ ಟಿಕೆಟ್ ಘೋಷಿಸಲಾಗಿದೆ.
ಬೆಂಗಳೂರು ಕೇಂದ್ರದಿAದ ಪಿ.ಸಿ.ಮೋಹನ್ ಅವರಿಗೆ ಟಿಕೆಟ್ ಕೈ ತಪ್ಪಲಿದೆ ಎಂಬ ವದಂತಿ ನಡುವೆಯೂ ಅವರು ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಚಿಕ್ಕೋಡಿ ಕ್ಷೇತ್ರದಲ್ಲಿ ರಮೇಶ್ ಕತ್ತಿ ಬಿಗಿ ಪಟ್ಟಿನ ನಡುವೆಯೂ ಅಣ್ಣಾಸಾಹೇಬ್ ಜೊಲ್ಲೆ ಅವರಿಗೆ ಟಿಕೆಟ್ ಸಿಕ್ಕಿದೆ. ಬೆಂಗಳೂರು ಗ್ರಾಮೀಣ ಕ್ಷೇತ್ರದಿಂದ ಜಯದೇವ ಆಸ್ಪತ್ರೆ ಮಾಜಿ ನಿರ್ದೇಶಕ ಡಾ.ಮಂಜುನಾಥ್ ಅವರಿಗೆ ಬಿಜೆಪಿ ಮಣೆ ಹಾಕಿದೆ.
ಕ್ಷೇತ್ರವಾರು ಅಭ್ಯರ್ಥಿಗಳ ಮಾಹಿತಿ ಈ ಕೆಳಗಿನಂತಿದೆ.
ಚಿಕ್ಕೋಡಿ – ಅಣ್ಣಾಸಾಹೇಬ್ ಜೊಲ್ಲೆ
ಬಾಗಲಕೋಟೆ – ಪಿ.ಸಿ. ಗದ್ದಿಗೌಡರ್
ವಿಜಯಪುರ – ರಮೇಶ ಜಿಗಜಿಣಗಿ
ಕಲಬುರಗಿ – ಉಮೇಶ್ ಜಾಧವ್
ಬೀದರ್ – ಭಗವಂತ್ ಖೂಬಾ
ಕೊಪ್ಪಳ – ಡಾ. ಬಸವರಾಜ್ ಕ್ಯಾವತ್ತೂರು
ಬಳ್ಳಾರಿ – ಬಿ. ಶ್ರೀರಾಮುಲು
ಹಾವೇರಿ – ಬಸವರಾಜ ಬೊಮ್ಮಾಯಿ
ಧಾರವಾಡ – ಪ್ರಹ್ಲಾದ್ ಜೋಶಿ
ದಾವಣಗೆರೆ – ಗಾಯತ್ರಿ ಸಿದ್ದೇಶ್ವರ್
ಶಿವಮೊಗ್ಗ – ಬಿ.ವೈ. ರಾಘವೇಂದ್ರ
ಚಿಕ್ಕಮಗಳೂರು – ಉಡುಪಿ – ಕೋಟ ಶ್ರೀನಿವಾಸ್ ಪೂಜಾರಿ
ದಕ್ಷಿಣ ಕನ್ನಡ – ಬ್ರಿಜೇಶ್ ಚೌಟ
ತುಮಕೂರು – ವಿ. ಸೋಮಣ್ಣ

