
ಬೆಂಗಳೂರು, ಸೆ.7- ಸುಗಮ ಸಂಗೀತ ಕ್ಷೇತ್ರದ ಪ್ರತಿಷ್ಠಿತ ಸಂಸ್ಥೆಯಾಗಿರುವ ಬೆಂಗಳೂರಿನ ಆದರ್ಶ ಸುಗಮ ಸಂಗೀತ ಅಕಾಡೆಮಿಯು 2023 ನೇ ಸಾಲಿನ ರಾಜ್ಯಮಟ್ಟದ ಪ್ರತಿಷ್ಠಿತ `ಕನ್ನಡ ನಿತ್ಯೋತ್ಸವ ಪ್ರಶಸ್ತಿ’ಯನ್ನು ಪ್ರಕಟಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಡಾ.ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಕಲಬುರಗಿಯ ಕವಿ, ಲೇಖಕರಾದ ಮಹಿಪಾಲರೆಡ್ಡಿ ಮುನ್ನೂರ್, ಖ್ಯಾತ ಗಾಯಕಿ ಶಶಿಕಲಾ ಸುನೀಲ್, ಪ್ರತಿಷ್ಠಿತ ಸಂಸ್ಥೆ ವೀಣಾ ಮ್ಯೂಸಿಕಲ್‌ನ ಮಾಲೀಕರಾದ ಪಿ.ನಾಗರಾಜ್, ಕನ್ನಡ ಕಾರ್ಯಕರ್ತ, ಸಂಘಟಕ ಜಾವಗಲ್ ಪ್ರಸನ್ನಕುಮಾರ, ರಂಗಕರ್ಮಿ, ನಟ ಬೆಳ್ಳಿಚುಕ್ಕಿ ವೀರೇಂದ್ರ ಅವರುಗಳಿಗೆ ಕನ್ನಡ ನಿತ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬೆಂಗಳೂರಿನ ಗವಿಪುರಂ ಗುಟ್ಟಹಳ್ಳಿಯಲ್ಲಿರುವ ಉದಯಭಾನು ಕಲಾ ಸಂಘದಲ್ಲಿ ಸೆ.10 ರಂದು ಸಂಜೆ 6 ಕ್ಕೆ ಆಯೋಜಿಸಲಾಗಿದೆ. ಮಾಜಿ ವಿಧಾನಸಭಾಧ್ಯಕ್ಷರಾದ ಪ್ರೊ.ಬಿ.ಕೆ.ಚಂದ್ರಶೇಖರ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಅಕಾಡೆಮಿ ಅಧ್ಯಕ್ಷ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸುವರು. ಬಸವನಗುಡಿ ಶಾಸಕರಾದದ ಎಲ್.ಎ.ರವಿ ಸುಬ್ರಮಣ್ಯ ಅವರು ಪ್ರಶಸ್ತಿ ಪ್ರದಾನ ಮಾಡುವರು. ಹಿರಿಯ ಸಾಹಿತಿ ಮತ್ತು ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಭೈರಮಂಗಲ ರಾಮೇಗೌಡ ಅವರು ಸಮಾರೋಪ ನುಡಿಗಳಾಡುವರು. ನಾಡಿನ ಖ್ಯಾತ ಕಲಾವಿದರಿಂದ ಸುಗಮ ಸಂಗೀತ ಗಾಯನ, ಹೆಚ್.ಬಿ.ಜಯರಾಂ, ರಾಘವೇಂದ್ರ ಜೋಶಿ, ಜೈಕುಮಾರ ತಂಡದವರಿಂದ ವಾದ್ಯ ವೈಭವ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.

