- ಪಗಲಾಪುರ – ಭೀಮನಬಂಡಿ ಹಳ್ಳ ಸೇತುವೆ ಕುಸಿತ: ಸಂಪರ್ಕ ಕಡಿತ
- ಸ್ಥಳಕ್ಕೆ ಶಾಸಕರ ಭೇಟಿ- ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ
ಸತ್ಯಕಾಮ ವಾರ್ತೆ ಯಾದಗಿರಿ:
ಕಳೆದ ಮೂರು ದಿನಗಳ ಹಿಂದೆ ಕುಸಿದು ಬಿದ್ದಿರುವ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪಗಲಾಪುರ-ಭೀಮನದಡ್ಡಿ ರಸ್ತೆ ಸಂಪರ್ಕ ಕಲ್ಪಿಸುವ ಸೇತುವೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ್ ಪರಿಶೀಲಿಸಿದರು.
ಅತ್ಯಂತ ಹಳೆ ಸೇತುವೆಯಾಗಿರುವ ಇದು ಸುಮಾರು ಹದಿನೈದು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ಸೇತುವೆಯಾಗಿದ್ದು, ಹರಿದು ಬಂದ ಮಳೆ ನೀರಿನ ಒತ್ತಡ ತಾಳದೆ ಸೇತುವೆ ಕುಸಿದಿದೆ.
ಇದರಿಂದ ಜನಸಂಪರ್ಕಕ್ಕೆ ತುಂಬಾ ತೊಂದರೆಯಾಗಿದ್ದು, ಇದನ್ನು ಕೂಡಲೇ ದುರಸ್ತಿ ಕಾರ್ಯ ಮಾಡಿಸಲಾಗುವುದೆಂದು ಶಾಸಕರು ಹೇಳಿದರು.
- Advertisement -
ಸೋಮವಾರ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿದ ಶಾಸಕರು ಸುಮಾರು ಅರ್ಧ ಗಂಟೆಗಳ ಕಾಲ ಕುಸಿದು ಬಿದ್ದಿರುವ ಸೇತುವೆ ಪರಿಶೀಲಿಸಿದರು. ಆಗ ಸುತ್ತ ಮುತ್ತಲಿನ ಜನರು ಆ ರಸ್ತೆ ಮೇಲಿಂದಲೇ ವಾಹನಗಳ ಕೈಯಲ್ಲಿ ಹಿಡಿದು ನಡೆದುಕೊಂಡು ದಾಟುತ್ತಿರುವ ದೃಶ್ಯ ಕಂಡ ಶಾಸಕರು, ಇದು ಅಪಾಯಕಾರಿ ಸೂಚನೆ, ದಯವಿಟ್ಟು ಕೆಲ ದಿನಗಳ ಮಟ್ಟಿಗೆ ಈ ಸೇತುವೆ ರಸ್ತೆ ಉಪಯೋಗಿಸಬಾರದು, ಕಾರಣ ಸ್ವಲ್ಪ ಹೆಚ್ಚು ಕಡಿಮೆಯಾದರೂ ಜೀವಕ್ಕೆ ತೊಂದರೆ ಇದೆ ಎಂದು ಹೇಳಿ ನಾಳೆಯಿಂದ ಈ ರಸ್ತೆ ಸಂಪರ್ಕ ಬಂದ್ ಮಾಡುವಂತೆಯೆ ಅಧಿಕಾರಿಗಳಿಗೆ ಸೂಚಿಸಿದರು. ತಕ್ಷಣವೇ ಈ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸುವಂತೆ ಪಿಎಸ್ಐ ಬಂಕಲಗಿಗೆ ಶಾಸಕರು ಹೇಳಿದರು.
ಈ ವೇಳೆ ಗ್ರಾಮದ ಬಸವರಾಜಪ್ಪ ಗೌಡ ದಳಪತಿ, ಇಂಜಿನಿಯರ್ ಶ್ರೀಧರ ಸಾರ್ವಜನಿಕರು ಇದ್ದರು.
ಈ ಸೇತುವೆ ಮೂಲಕ ಚಟಗೇರಾ, ಮಷ್ಠುರ್, ಕೌಳೂರು, ಸಾವುರು, ಮಲ್ಹಾರ್, ಹೆಗ್ಗಣದೊಡ್ಡಿ, ಯಾತನಾಳ, ಸೈದಾಪುರ ಹಾಗೂ ಲಿಂಗೇರಿ, ನಾಗರಬಂಡಾ, ಗೌಡಗೇರಿ, ಕಿಲ್ಲನಕೇರಾ, ಸೇರಿದಂತೆಯೇ ವಿವಿಧ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಮಳೆ ನಿಂತ ಕೂಡಲೇ ದುರಸ್ತಿ ಕಾರ್ಯ ಆರಂಭಿಸಲಾಗುವುದು. ಅಲ್ಲಿಯವರೆಗೂ ಸಂಪರ್ಕ ಬಂದ್ ಮಾಡಲಾಗುವುದು. ಇಲ್ಲಿಯೇ ಹೊಸ ಸೇತುವೆ ನಿರ್ಮಾಣಕ್ಕೆ 8 ಕೋಟಿ ರೂ. ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅನುಮೊದನೆ ಸಿಕ್ಕ ಕೂಡಲೇ ಕೆಲಸ ಆರಂಭಿಸಲಾಗುವುದು.
- Advertisement -
ಚನ್ನಾರಡ್ಡಿ ಪಾಟೀಲ್ ತುನ್ನೂರ್, ಶಾಸಕರು, ಯಾದಗಿರಿ ಮತಕ್ಷೇತ್ರ

