ಸತ್ಯಕಾಮ ವಾರ್ತೆ ಯಾದಗಿರಿ:
ಮಳೆಗಾಲ ಪ್ರಾರಂಭವಾಗಿದ್ದು, ಸಾರ್ವಜನಿಕರ ಆರೋಗ್ಯದ ಹಿತದಷ್ಟಿಯಿಂದ ಸಾಂಕ್ರಾಮಿಕ ರೋಗಗಳನ್ನು ಎಲ್ಲ ರೀತಿಯಿಂದಲೂ ನಿಯಂತ್ರಿಸುವ ಅವಶ್ಯಕತೆ ಇದ್ದು, ತಾಲೂಕಿನ ಎಲ್ಲ ಪಂಚಾಯಿತಿ ಅಭಿವದ್ಧಿ ಅಧಿಕಾರಿಗಳು ಮುಂಜಾಗ್ರತೆ ಕ್ರಮ ವಹಿಸುವಂತೆ ಯಾದಗಿರಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ್ ಶರಬೈ ಸೂಚಿಸಿದರು.
ಸೋಮವಾರ ತಾಲೂಕ ಪಂಚಾಯತ ಸಭಾಂಗಣದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಸ್ವಚ್ಛತೆ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು, ಯಾದಗಿರಿ ತಾಲೂಕಿನ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಅವಶ್ಯಕ ಕ್ರಮಗಳನ್ನು ತೆಗೆದುಕೊಳ್ಳಬೇಕು. ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ ನೀಡಬೇಕು. ತೆರೆದ ಬಾವಿಗೆ ಪ್ರತಿದಿನ ಕ್ಲೋರಿನ್, ಬ್ಲಿಚಿಂಗ್ ಪೌಡರ್ ಹಾಕಬೇಕು. ಕುಡಿಯುವ ನೀರಿನ ಮೂಲಗಳ ಸುತ್ತಮುತ್ತಲು ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಹಾಗೂ ಸರಬರಾಜು ಮಾಡುವ ಕೊಳವೆಗಳಲ್ಲಿ ಸೋರಿಕೆಗಳಿದ್ದಲ್ಲಿ ದುರಸ್ಥಿ ಕಾರ್ಯ ಕೈಗೊಳ್ಳಬೇಕು ಎಂದು ಹೇಳಿದರು.
ಚರಂಡಿಗಳನ್ನು ಸ್ವಚ್ಛ ಮಾಡುವುದರ ಜೊತೆಗೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮೊಹರಂ ಹಬ್ಬ ಇರುವುದರಿಂದ ಪಟ್ಟಣ ಪ್ರದೇಶಗಳಿಂದ ಜನರು ಬಂದಿರುತ್ತಾರೆ. ಮುಂಜಾಗ್ರತಾ ಕ್ರಮವಾಗಿ ಹೋಟೆಲ್‌ಗಳಲ್ಲಿ ಸ್ವಚ್ಛತೆಯನ್ನು ಕಾಪಾಡಲು ಸೂಚಿಸಬೇಕು, ಹಾಗೂ ಸಾರ್ವಜನಿಕರಿಗೆ ಜನಜಾಗೃತಿ ಮೂಡಿಸಬೇಕು ಎಂದರು.
- Advertisement -
ಈ ವೇಳೆ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರಾದ ಬಸವರಾಜ ಹೈರಡ್ಡಿ ಸಭೆಯಲ್ಲಿ ಹಾಜರಿದ್ದು, ಶುದ್ಧ ಕುಡಿಯುವ ನೀರಿನ ಘಟಕಗಳ ಮಾಹಿತಿ ನೀಡಿದರು. ಮತ್ತು ಜೆ.ಜೆ.ಎಮ್ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು.
ಪೈಪ್ ಲೀಕೆಜ್ ಆದಲ್ಲಿ ಮತ್ತು ಕಾಮಗಾರಿ ಅಪೂರ್ಣ ಇದ್ದಲ್ಲಿ ತಕ್ಷಣವೇ ಪೂರ್ಣಗೊಳಿಸುವಂತೆ ಕಾರ್ಯನಿರ್ವಾಹಕ ಅಧಿಕಾರಿಗಳು ಸೂಚಿಸಿದ್ದರು.
ತಾಲೂಕು ವೈದ್ಯಧಿಕಾರಿಗಳಾದ ಡಾ.ಹಣವಂತ ರೆಡ್ಡಿ ಸಭೆಯಲ್ಲಿ ಮಾತನಾಡಿ, ಗ್ರಾಮದಲ್ಲಿ ಸ್ವಚ್ಚತೆ ಕಾಪಾಡುವುದರೊಂದಿಗೆ ಬ್ಲಿಚಿಂಗ್ ಪೌಡರ್ ಸಿಂಪಡಿಸಲು ಸೂಚಿಸಲಾಗಿದೆ, ಈಗಾಗಲೇ ಗ್ರಾಮದಲ್ಲಿ ನಮ್ಮ ಆಶಾ ಕಾರ್ಯಕರ್ತೆಯರು ಆರೋಗ್ಯ ಮತ್ತು ಸ್ವಚ್ಛತೆ ಕುರಿತು ಮನೆ ಮನೆಗೆ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆಂದು ತಿಳಿಸಿದರು.
ಈ ವೇಳೆ ಯಾದಗಿರಿ ಸಹಾಯಕ ನಿರ್ದೇಶಕರು, ತಾಲೂಕಿನ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದರು.

