ಸತ್ಯಕಾಮ ವಾರ್ತೆ ಶಹಾಪುರ:
ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಸಹಾಯಕ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಏಪ್ರಿಲ್ ತಿಂಗಳಲ್ಲಿ ನಿವೃತ್ತಿ ಹೊಂದಿದ್ದ ರುಕ್ಮೀಣಿ ಎಂ. ಅವರಿಗೆ ಆರೋಗ್ಯ ಇಲಾಖೆ ಶಾಕ್ ನೀಡಿದ್ದೂ ಇದೀಗ ಆಕೆಯ ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಹಾಯಕ ಆಡಳಿತಾಧಿಕಾರಿಯಾಗಿ ತಾಲೂಕು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರುಕ್ಮೀಣಿ ಎಂ. ಅವರು ಆರೋಗ್ಯ ಇಲಾಖೆಯ ನೇಮಕಾತಿಯ ಸಂದರ್ಭದಲ್ಲಿ ತಮ್ಮ ಎಸ್.ಎಸ್.ಎಲ್.ಸಿ ಅಂಕಪಟ್ಟಿಯಲ್ಲಿದ್ದ ದಿ;24/04/1961ರ ಜನ್ಮ ದಿನಾಂಕವನ್ನು ದಿ: 24/04/1964 ಅಂತ ತಿದ್ದುಪಡಿ ಮಾಡಿ 1985 ನೇ ಸಾಲಿನಲ್ಲಿ ಬೆಂಗಳೂರ ನೇಮಕಾತಿ ಪ್ರಾಧಿಕಾರಿ ಮುಖ್ಯ ಕಛೇರಿಯಲ್ಲಿ ತಿದ್ದುಪಡಿ ದಾಖಲೆ ಸಲ್ಲಿಸಿ ಕೆಲಸ ಗಿಟ್ಟಿಸಿಕೊಂಡಿದ್ದರು.
- Advertisement -
ಈ ಬಗ್ಗೆ ವಿಚಾರಣೆ ನಡೆಸಿದ ಆರೋಗ್ಯ ಇಲಾಖೆಗೆ ರುಕ್ಮಿಣಿ ಅವರು ತಮ್ಮ ಎಸ್.ಎಸ್.ಎಲ್.ಸಿ ಅಂಕಪಟ್ಟಿ ತಿದ್ದುಪಡಿ ಮಾಡಿ ತನ್ನ ಸ್ವಂತ ಲಾಭಕ್ಕಾಗಿ ಇಲಾಖೆಯಲ್ಲಿ ಮೂರು ವರ್ಷಗಳ ಕಾಲ ಹೆಚ್ಚಿಗೆ ಕರ್ತವ್ಯ ಮಾಡಿರುತ್ತಾರೆ ಎಂಬ ಅಂಶಗಳು ಬೆಳಕಿಗೆ ಬಂದಿದ್ದೂ, ವರದಿ ಆಧಾರದ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಯಾದಗಿರಿ ರವರ ಸೂಚನೆ ಮೇರೆಗೆ ಪ್ರಭಾರ ಮುಖ್ಯ ವೈದ್ಯಾಧಿಕಾರಿ ಡಾ:ಯಲ್ಲಪ್ಪ ಅವರು ನಿವೃತ್ತಿ ಹೊಂದಿರುವ ರುಕ್ಮೀಣಿ ಎಂ. ಅವರ ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕಲಂ:409, 420, 465, 468, 471 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಶಹಾಪುರ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ ಎಂದು ಸತ್ಯಕಾಮ ಪತ್ರಿಕೆಗೆ ಪೊಲೀಸ್ ಮೂಲಗಳು ತಿಳಿಸಿವೆ.

