ತ್ಯಾಗ ಎಂಬ ಪದದ ಅರ್ಥವೇ ಅಸಾಧಾರಣವಾದದ್ದು. ತ್ಯಾಗ ಎಂಬ ಪದ ಆಳವಾದ, ಅರ್ಥವನ್ನು ಹೊಂದಿದೆ. ಮೌಲ್ಯಯುತವಾದ ಬದುಕನ್ನು ರೂಪಿಸಿಕೊಳ್ಳುವ ಮುಖ್ಯ ಭಾಗವೇ ತ್ಯಾಗ ಎನ್ನಬಹುದು. ಇದು ನಿಸ್ವಾರ್ಥತೆಯ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ತ್ಯಾಗವೂ ತನ್ನ ಹಿತಾಶಕ್ತಿಯ ಜೊತೆಗೆ ಇತರರ ಅಭಿವೃದ್ಧಿ ಅಥವಾ ಅವರ ಕಲ್ಯಾಣವನ್ನು ಒತ್ತಿ ಹೇಳುತ್ತದೆ. ಮಾನವೀಯತೆಯಿಂದ ಕೂಡಿದ ಸಮಾಜದ ಒಳಿತಿಗಾಗಿ ಅಹಂಕಾರ ಮತ್ತು ಸ್ವ-ಕೇಂದ್ರಿತ ಬಯಕೆಗಳನ್ನು ತ್ಯಜಿಸುವುದು ಎಂಬ ಅರ್ಥವನ್ನು ಕೊಡುತ್ತದೆ. ತ್ಯಾಗ ಮಾಡಲು ಮೊದಲು ಮನಸ್ಸಿರಬೇಕು, ನಿಸ್ವಾರ್ಥತೆಯಿಂದ ಕೂಡಿರಬೇಕು, ಸಾಮಾಜಿಕ ಬದ್ಧತೆ, ಕಳಕಳಿ ಹಾಗೂ ಸಾಮಾಜಿಕ ಮನೋಭಾವನೆ ಉಳ್ಳವರಾಗಿರಬೇಕು. ಇಂತಹವರು ಮಾತ್ರ ತನ್ನ ದುರಾಸೆ, ಅತಿಯಾದ ಬಯಕೆಯಿಂದ ಕೂಡಿದ ಸ್ವಾರ್ಥವನ್ನು ತ್ಯಜಿಸಿ ತ್ಯಾಗದ ಮನೋಬಾವನೆಯನ್ನು ಬೆಳಸಿಕೊಳ್ಳುತ್ತಾರೆ. ಉದಾರತೆಯು ಎಲ್ಲರ ಹೃದಯವನ್ನು ಗೆಲ್ಲುತ್ತದೆ. ತ್ಯಾಗವು ಮಹದಾನಂದ ಸಾರ್ಥಕತೆಯ ತೃಪ್ತಿಯನ್ನು ತರುತ್ತದೆ. ತ್ಯಾಗದ ಅರಿವು ಬೆರಳೆಣಿಕೆಯಷ್ಟು ಜನರಲ್ಲಿರುತ್ತದೆ. ಅರಿವಿನ ಕೊರತೆಯಿಂದ ಜನರನ್ನು ಸ್ವಾರ್ಥದೆಡೆಗೆ ಕೊಂಡೊಯ್ಯುತ್ತದೆ.
ತ್ಯಾಗ ಎಂಬ ಪದವನ್ನು ಬಳಸಲು, ತಿಳಿಯಲು, ಉಪಯೋಗಿಸಲು ಜೀರ್ಣಿಸಿಕೊಳ್ಳಲು ಹಾಗೂ ಉಪದೇಶಿಸಲು ಎಲ್ಲರಿಂದಲೂ ಸಾಧ್ಯವಿಲ್ಲ .ಮನುಷ್ಯನ ಗುಣವೇ ಸ್ವಾರ್ಥತೆಯಿಂದ ಕೂಡಿದೆ ನಿಸ್ವಾರ್ಥ ಸೇವೆಯ ಪರ್ಯಾಯ ಪದವೇ ತ್ಯಾಗವೆಂದು ಹೇಳಬಹುದು. ಇಡೀ ಜಗತ್ತಿನಲ್ಲಿ ಸಮಾಜಕ್ಕಾಗಿ ತ್ಯಾಗ ಮಾಡಿರುವವರು ಬಹಳ ವಿರಳ ಹಾಗೂ ಬೆರಳೆಣಿಕೆಯಷ್ಟು ಮಹನೀಯರು ಮಾತ್ರ ನಮಗೆ ಸಿಗುತ್ತಾರೆ. ತ್ಯಾಗ ಎಂಬ ಶಬ್ದಕ್ಕೆ ಅಥವಾ ಪದಕ್ಕೆ ಅರ್ಥ ಕೊಟ್ಟಿರುವವರೆಂದರೆ ಮೊದಲಿಗೆ ತಾಯಿ, ತಾಯಿಗೆ ಸರಿಸಾಟಿಯೇ ತ್ಯಾಗ. ಈ ವಿಶ್ವದ ತ್ಯಾಗದ ಪಿತಾಮಹರೆಂದರೆ ಅಮ್ಮ ಎಂದು ವ್ಯಾಖ್ಯಾನಿಸಬಹುದು. ಅಮ್ಮ ಎಂಬ ಪದದ ಅರ್ಥವೇ ತ್ಯಾಗ, ತ್ಯಾಗ ಎಂಬ ಪದದ ಅರ್ಥವೇ ಅಮ್ಮ. ಅಮ್ಮ ಎನ್ನುವುದು ಒಂದು ಶಕ್ತಿ, ತಾನು ಹಸಿವಿನಲ್ಲಿದ್ದರೂ ತನ್ನ ಮಕ್ಕಳಿಗೆ ಹಸಿವಾಗದಂತೆ ನೋಡುವ, ತಾನು ಎಷ್ಟೇ ಕಷ್ಟ ಅನುಭವಿಸಿದರೂ, ಮಕ್ಕಳು ಸುಖದಿಂದ ಇರಲಿ ಎಂದು ಆಶಿಸುತ್ತಾ, ಆಕೆ ಅಕ್ಷರ ಕಲಿಯದಿದ್ದರೂ ತನ್ನ ಮಗು ವಿದ್ಯಾಭ್ಯಾಸದಿಂದ ವಂಚಿತನಾಗಬಾರದೆAದು ಹಗಲು ರಾತ್ರಿ ಎನ್ನದೆ ಸಮಯದ ಪರಿವೇ ಇಲ್ಲದೇ ಮನೆಯ ಒಳಗೆ ಮತ್ತು ಹೊರಗೆ ತನ್ನ ಮಕ್ಕಳಿಗೆ ಯಾವುದೇ ತೊಂದರೆ ಆಗಬಾರದೆಂದು ದುಡಿಮೆ ಮಾಡಿ ತನ್ನೆಲ್ಲಾ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ, ಮಕ್ಕಳ ಹಾರೈಕೆಯಲ್ಲಿ ಬದುಕುತ್ತಾಳೆ. ಇಡೀ ಜೀವವನ್ನು ತನ್ನ ಮಕ್ಕಳಿಗಾಗಿ, ಸಮಾಜಕ್ಕಾಗಿ ಒಳಿತನ್ನು ಬಯಸುವ ಈ ಪ್ರಪಂಚದ ಮೊದಲಿನ ತ್ಯಾಗಮಯಿ ಅಮ್ಮ ಎನ್ನುವುದು ನೂರಕ್ಕೆ ನೂರು ಸತ್ಯ. ಹಾಗೆಯೇ ತಂದೆಯೂ ಕೂಡ ತನ್ನ ಕುಟುಂಬ, ಮಕ್ಕಳು, ಸಮಾಜಕ್ಕಾಗಿ ಹಗಲಿರುಳೆನ್ನದೆ ದುಡಿಯುವ ತ್ಯಾಗಮಯಿ ತಂದೆ.
ಬುದ್ಧನ ಪ್ರಕಾರ ದುಃಖಕ್ಕೆ ಕಾರಣವಾಗುವ ಆಸೆಯನ್ನು ತ್ಯಜಿಸುವುದು ಒಂದು ರೀತಿಯ ತ್ಯಾಗ ಎಂದಿದ್ದಾರೆ. ಸ್ವಾರ್ಥತೆಯನ್ನು ತ್ಯಜಿಸಬೇಕೆಂದರೆ ತ್ಯಾಗ ಮಾಡಲೇಬೇಕು. ಸ್ವಾರ್ಥ ಮತ್ತು ತ್ಯಾಗ ಈ ಎರಡು ತದ್ವಿರುದ್ಧವಾದವುಗಳು. ಆದ್ದರಿಂದಲೇ ಬುದ್ಧರು ತನ್ನ ಆಸೆ, ಆಕಾಂಕ್ಷೆ, ಬಯಕೆಗಳನ್ನು, ಅರಮನೆಯ ಸಿರಿ ಸಂಪತ್ತನ್ನು ತ್ಯಾಗ ಮಾಡಿ, ಜಗತ್ತಿಗೋಸ್ಕರ ಇಡೀ ತನ್ನ ಜೀವನವನ್ನೇ ಮುಡುಪಾಗಿಟ್ಟಿದ್ದರು. ಆದ್ದರಿಂದಲೇ ಬೌದ್ಧಧಮ್ಮ ಸಮಾಜದ ಒಳಿತಿಗಾಗಿ ನಮ್ಮ ಕಣ್ಣಿಗೆ ಕಾಣುವ ಜಗತ್ತಿನ ಎರಡನೆಯ ಸತ್ಯ ಹಾಗೂ ತ್ಯಾಗದ ಸಂಕೇತವಾಗಿದೆ.
ಬಸವಣ್ಣರವರ ಪ್ರಕಾರ ತ್ಯಾಗದ ಮೇಲಿನ ದೃಷ್ಟಿಕೋನವು ನಿಸ್ವಾರ್ಥತೆ ಮತ್ತು ಸೇವೆಯ ಕಲ್ಪನೆಯಲ್ಲಿ ಬೇರೂರಿದೆ ಎಂದಿದ್ದಾರೆ. ಅವರ ಸಾಮಾಜಿಕ ಪರಿಕಲ್ಪನೆ ತ್ಯಾಗದಿಂದ ಕೂಡಿದೆ. ಅವರಲ್ಲಿದ್ದ ಕರುಣೆ, ಪ್ರೀತಿ, ವಾತ್ಸಲ್ಯ, ಮಮತೆ, ಮನವೀಯತೆ, ಸಾಮಾಜಿಕ ಕÀಳಕಳಿ ತನ್ನ ಜೀವನದ ಗುರಿಯಾದ್ದರಿಂದ ಇದನ್ನು ಸಾಧಿಸಲು ತಮ್ಮ ಜೀವನವನ್ನೇ ತ್ಯಾಗ ಮಾಡಿದ ಸಾಮಾಜಿಕ ಕ್ರಾಂತಿಪುರುಷ ಎನಿಸಿ ಕೊಂಡಿದ್ದಾರೆ.
- Advertisement -
“ಪ್ರಬುದ್ಧ ಭಾರತದ” ನಿರ್ಮಾಣಕ್ಕಾಗಿ “ಬಹುಜನಹಿತಾಯ ಬಹುಜನಸುಖಾಯ” ಎಂಬ ಸಿದ್ಧಾಂತದಡಿ ಇಡೀ ಸಮಾಜಕ್ಕಾಗಿ ತನ್ನ ಜೀವನವನ್ನೇ ತ್ಯಾಗ ಮಾಡಿದ ಮಹಾ ದಾರ್ಶನಿಕ, ಜ್ಞಾನದಶಿಖರ, ಮಾನವತಾವಾದಿ, ಸಮಾಜಸುಧಾರಕ, ಶಿಕ್ಷಣತಜ್ಞ, ಆರ್ಥಿಕತಜ್ಞ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಬುದ್ಧರ ತತ್ವಸಿದ್ಧಾಂತವನ್ನು ಜಾರಿ ಮಾಡುವ ಸಲುವಾಗಿ ತನ್ನ ಜೀವನದ ಆಸೆ, ಆಕಾಂಕ್ಷೆ, ಬಯಕೆ, ವೈಯಕ್ತಿಕ ಸುಖ ಸಂತೋಷ ಎಲ್ಲವನ್ನೂ ಸಮಾಜಕ್ಕಾಗಿ ಧಾರೆಯೆರೆದ, ತ್ಯಾಗಮಯಿ ಎಂದರೆ ತಪ್ಪಾಗುವುದಿಲ್ಲ. “ಇನ್ನೊಬ್ಬರನ್ನು ಸೋಲಿಸುವುದು ಜೀವನವಲ್ಲ, ಅವರನ್ನು ಗೆಲ್ಲಿಸುವುದೇ ಜೀವನ”, ನೀನು ನಿನಗಾಗಿ ಜೀವನ ಮಾಡಬೇಡ,ಇತರರಿಗಾಗಿ ಜೀವನ ಮಾಡು. ಜೀವನ ಸಾರ್ಥಕವಾಗುವುದು ನಾವು ಎಷ್ಟು ಸುಖ, ಸಂತೋಷದಿAದ ಇದ್ದೇವೆ ಎಂಬುದರಿAದಲ್ಲ. ನಿಮ್ಮಿಂದಾಗಿ ಎಷ್ಟು ಜನ ಸುಖ, ಶಾಂತಿ ಸಂತಸದಿAದ ಇದ್ದಾರೆ ಎಂಬುದು ಮುಖ್ಯ. ಹಾಗೆಯೇ ಮತ್ತೊಬ್ಬರ ಸಂತೋಷವನ್ನೇ ಬಯಸುವ ಮನಸ್ಸು…. ತನ್ನಲ್ಲಿರುವ ನೋವುಗಳನ್ನು ಎಂದಿಗೂ ಲೆಕ್ಕ ಹಾಕುವುದಿಲ್ಲ ಎಂಬ ಬಾಬಾಸಾಹೇಬರ ತ್ಯಾಗದ ಮನೋಭಾವನೆಯಿಂದಲೇ ನಮಗೆ ಸಂವಿಧಾನ ದೊರಕಿ ಶೋಷಿತಸಮುದಾಯಗಳಿಗೆ ಸಮಾನತೆಯ ಹಕ್ಕು, ಅಧಿಕಾರ ಸಿಕ್ಕಂತಾಗಿದೆ.
ದೇಶಕ್ಕಾಗಿ ತನ್ನ ಸಂಸಾರ, ಬಂಧು, ಬಳಗ, ತಂದೆ, ತಾಯಿ, ಅಣ್ಣ, ತಮ್ಮ, ಅಕ್ಕ, ತಂಗಿಯರೆಲ್ಲರನ್ನೂ ಬಿಟ್ಟು, ಪ್ರಾಣದ ಹಂಗಿಲ್ಲದೆ ದೇಶದರಕ್ಷಣೆಯೇ ನನ್ನ ಗುರಿ ಎಂಬ ಮನಸ್ಸಿನಿಂದ ರಾಷ್ಟçದ ರಕ್ಷಣೆ, ದೇಶದ ಹಿತ, ಕಾಯುವುದೇ ಸೈನಿಕರ ಆದ್ಯ ಕರ್ತವ್ಯ ಎಂದು ತಿಳಿದು ದೇಶಕ್ಕಾಗಿ ಪ್ರಾಣತೆತ್ತುತ್ತಾರೆ. ಹಾಗೆ ನೋಡಿದರೆ ಇಡೀ ಜಗತ್ತಲ್ಲಿ ತಮ್ಮ ದೇಶಕ್ಕೋಸ್ಕರ ದೇಶದ ಉಳಿವಿಗಾಗಿ ಕೋಟಿ ಕೋಟಿ ಸೈನಿಕರು, ದೇಶಾಭಿಮಾನಿಗಳು ಶತೃಗಳ ವಿರುದ್ದ ಹೋರಾಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿ ದೇಶದ ಹಿತವನ್ನು ಕಾಯ್ದಿದ್ದಾರೆ, ಅವರ ತ್ಯಾಗ ಮತ್ತು ಬಲಿದಾನದಿಂದ ದೇಶದ ರಕ್ಷಣೆಯಾಗುತ್ತಿದೆ, ಇದುವೇ ನಿಜವಾದ ತ್ಯಾಗ. ಇವರ ತ್ಯಾಗದ ಗುಣವೇ ಸಮಾಜಕ್ಕೆ ಮಾದರಿಯಾಗಿದೆ.
ಗಾಂಧೀಜಿಯವರ ತ್ಯಾಗ, ನಿಸ್ವಾರ್ಥತೆಯಿಂದ ಹಗಲು ಇರುಳೆನ್ನದೆ ಬ್ರಿಟೀಷರ ವಿರುದ್ಧ ಹೋರಾಡುವ ಮೂಲಕ ಮಾತೃಭೂಮಿಗಾಗಿ ತನ್ನ ಪ್ರಾಣದ ಹಂಗನ್ನು ತೊರೆದು, ದೇಶಕ್ಕೆ ಸ್ವಾತಂತ್ರವನ್ನು ತಂದುಕೊಟ್ಟಿದ್ದಾರೆ. ಇದಕ್ಕಾಗಿಯೇ ಗಾಂಧೀಜಿಯವರನ್ನು ರಾಷ್ಟçಪಿತ ಎಂದು ಕರೆಯಲಾಗುತ್ತದೆ. ಗಾಂಧೀಜಿಯವರ ಆದರ್ಶಗಳು, ಅಹಿಂಸೆ ಮತ್ತು ಸತ್ಯದ ಮೂಲಕ ದೇಶದ ಸ್ವಾತಂತ್ರö್ಯವನ್ನು ಗಳಿಸುವುದಾಗಿತ್ತು. ಅವರ ತ್ಯಾಗ, ನಿಸ್ವಾರ್ಥ ಸೇವೆಯಿಂದಾಗಿ ಈ ದೇಶ ಪ್ರಗತಿಗೆ ಸಾಕ್ಷಿಯಾಗಿದೆ. ಮಾಗಡಿಯ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಎಂದೇ ಹೆಸರಾಗಿರುವ ಇವರ ಸಾಧನೆ ಇಡೀ ಜಗತ್ತಿಗೆ ಗೊತ್ತಿದೆ. ಇವರ ಸಾಮಾಜಿಕ ಕಳಕಳಿ, ಬದ್ಧತೆ, ಮಾನವೀಯ ಸಂಬAಧ, ಪರಿಸರÀದ ಮೇಲಿರುವ ಪ್ರೀತಿಯಿಂದ ತಿಮ್ಮಕ್ಕರ ಮನೆಯ ರಸ್ತೆಯ ಇಕ್ಕೆಲುಗಳಲ್ಲಿ ಸಸಿಗಳನ್ನು ನೆಟ್ಟಿ, ಬೆಳೆಸಿ, ಗಾಳಿ, ನೆರಳು, ಪಕ್ಷಿಗಳಿಗೆ ಆಹಾರ ತಂಪಾದ ವಾತಾವರಣವನ್ನು ನೀಡುವಂತೆ ಮಾಡಿದ ಇವರ ತ್ಯಾಗದ ಗುಣಕ್ಕೆ ನಾವು ತಲೆಬಾಗಲೇಬೇಕು.
ಭಾರತದ ಕ್ಷಿಪಣಿ ಮನುಷ್ಯ ಎಂದೇ ಕರೆಯಲ್ಪಡುವ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ತ್ಯಾಗ ಮತ್ತು ಸೇವಾ ಮನೋಭಾವನೆ, ಮಾದರಿ ಜೀವನದ ಮೂಲಕ ರಾಷ್ಟçದ ಆತ್ಮ ಸಾಕ್ಷಿಯ ಮೇಲೆ ಅಳಿಸಲಾಗದ ಛಾಪು ಮೂಡಿಸಿದರು. ವೈಜ್ಞಾನಿಕ ಸಾಧನೆಯ ಜೊತೆಗೆ ಸಾಮಾಜಿಕ ಬದ್ಧತೆ, ನಮ್ರತೆ, ಸಮಗ್ರತೆ ಮತ್ತು ನಿಸ್ವಾರ್ಥತೆಯಿಂದ ಸೇವೆ ಮಾಡಿದ್ದಾರೆ. ತಮ್ಮ ವೈಯಕ್ತಿಕ ಆಸೆ, ಆಕಾಂಕ್ಷೆ, ಬಯಕೆಗಳನ್ನು ಬದಿಗೊತ್ತಿ, ಭಾರತದ ಬಾಹ್ಯಾಕಾಶ ಮತ್ತು ಕ್ಷಿಪಣಿ ಕಾರ್ಯಕ್ರಮಗಳಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ರಾಷ್ಟçಕ್ಕೆ ಸೇವೆ ಸಲ್ಲಿಸುವ ತಮ್ಮ ಬದ್ಧತೆಯಲ್ಲಿ ಅಚಲರಾಗಿದ್ದರು. ಕಲಾಂ ಅವರ ಜೀವನ ಮತ್ತು ಪರಂಪರೆ ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯ ದಾರಿದೀಪವಾಗಿ ಕಾರ್ಯನಿರ್ವಹಿಸುತ್ತದೆ. ಅವರ ತ್ಯಾಗ, ಪರಿಶ್ರಮ ಮತ್ತು ಸೇವೆಯ ಶಕ್ತಿಯನ್ನು ನಮಗೆ ನೆನಪಿಸುತ್ತದೆ. ಇಂತಹ ಮಹಾತ್ಯಾಗಿಯ ಗುಣ, ವ್ಯಕ್ತಿತ್ವ, ಸಾಧನೆ ನಮಗೆ ಆದರ್ಶವಾಗಿದೆ.
ಮದರ್ ತೆರೇಸಾ ರವರು ನೊಂದ ಜೀವಿಗಳ ಆಶಾಕಿರಣ. ಅವರ ನಡೆ, ನುಡಿ, ಎಲ್ಲಾ ಕಾಲಕ್ಕೂ ದಾರಿದೀಪ. ದಯೆ, ಕರುಣೆಗಳಂತಹ ಮಾನವೀಯ ಗುಣಗಳನ್ನು ಇಟ್ಟುಕೊಂಡು ಲಕ್ಷಾಂತರ ನಿರಾಶ್ರಿತರಿಗೆ, ಬಡವರಿಗೆ, ವೃದ್ಧರಿಗೆ, ಶಿಕ್ಷಣ ವಂಚಿತರಿಗಾಗಿ, ಜೀವನವನ್ನೇ ಮುಡುಪಾಗಿಟ್ಟ ಮಹಾನ್ ತ್ಯಾಗಿ ಮದರ್ ತೆರೇಸಾ ದುರ್ಬಲರ ಸೇವೆಯಲ್ಲಿ ಹಗಲು ರಾತ್ರಿ ಎನ್ನದೇ ಇವರ ಸಂತೋಷಕ್ಕಾಗಿ, ಮುಂದಿನ ಅವರ ಭವಿಷ್ಯಕ್ಕಾಗಿ, ಜೀವನವನ್ನು ತ್ಯಾಗಮಾಡಿ ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಮಹಾತ್ಯಾಗಿ ತೆರೆಸಾರವರು. ಇಂತಹ ತೇರೆಸಾರವರು ಮತ್ತೇ, ಮತ್ತೇ ಹುಟ್ಟಿಬರಬೇಕೆಂಬುದೇ ನಮ್ಮ ಬಯಕೆ.
ಇಂದಿನ ಸಮಾಜದಲ್ಲಿ ಮನುಷ್ಯನಿಗೆ ಶರೀರದಲ್ಲಿ ಇರಬೇಕಾದ ಎಲ್ಲಾ ಅಂಗಾAಗಗಳು ಇದ್ದರೂ ಸೋಮಾರಿತನದಿಂದ ಹತಾಶೆ, ಜಿಗುಪ್ಸೆ, ನಿರುತ್ಸಾಹ, ಉದಾಸೀನ, ತಾತ್ಸಾರದ ಮನೋಬಾವನೆಯಿಂದ ತಮ್ಮ ಜೀವನವನ್ನು ರೂಪಿಸಿಕೊಳ್ಳದಿರುವವರನ್ನು ನಾವು ಕಾಣುತ್ತೇವೆ. ಇಂತಹ ಸಂಧಿಗ್ದತೆಯಲ್ಲಿ ಕೇರಳದ ಕೆ.ವಿ ರಾಬಿಯಾ ರವರು ಪೋಲಿಯೋದಿಂದ ತನ್ನ ಎರಡು ಕಾಲುಗಳ ಸ್ವಾಧೀನ ಇಲ್ಲದಿದ್ದರೂ ವ್ಹೀಲ್ ಛೇರ್‌ನ ಸಹಾಯದಿಂದಲೇ ಅವರ ಮನೆಯ ಸುತ್ತಾಮುತ್ತ ಇರುವ ಎಲ್ಲಾ ವಯೋಮಾನದ ಅನಕ್ಷರಸ್ಥರನ್ನು ಒಗ್ಗೂಡಿಸಿಕೊಂಡು ಅವರಿಗೆ ಅಕ್ಷರ ಬಿತ್ತಿ ಬೆಳೆಯಲು ನಾಂದಿ ಹಾಡಿದರು. ಕೇರಳ ರಾಜ್ಯದ ಒಂದು ಜಿಲ್ಲೆಯನ್ನೇ ಅಕ್ಷರಸ್ಥರನ್ನಾಗಿ ಮಾಡಿರುವ ಇವರ ಸಾಧನೆ, ತ್ಯಾಗದ ಭಾವನೆ ಅಸಾಧಾರಣವಾದದ್ದು. ಅವರು ಹೇಳುತ್ತಾ “ನೀವು ಒಂದು ಕಾಲನ್ನು ಕಳೆದು ಕೊಂಡರೆ ಇನ್ನೊಂದು ಕಾಲಿನ ಮೇಲೆ ಎದ್ದು ನಿಲ್ಲಿರಿ, ಎರಡು ಕಾಲುಗಳನ್ನು ಕಳೆದುಕೊಂಡರೆ ನಿಮ್ಮ ಕೈಗಳಿಂದ ಬದುಕನ್ನು ನಡೆಸಿ, ಒಂದು ವೇಳೆ ಎರಡು ಕಾಲು, ಕೈಗಳನ್ನು ಕಳೆದುಕೊಂಡರೂ ನಿಮ್ಮ ಮೆದುಳಿನ ಸಾಮರ್ಥ್ಯದ ಮೇಲೆ ಬದುಕಿ ಸಮಾಜಕ್ಕಾಗಿ ಏನನ್ನಾದರು ಕೊಡುಗೆಯಾಗಿ ನೀಡಿ ಎಂದಿದ್ದಾರೆ. ಇವರ ಈ ತ್ಯಾಗದ ಗೂಣ ಇಡೀ ಸಮಾಜಕ್ಕೆ ಮಾದರಿಯಾಗಿದೆ.
ಹೀಗೆ ಸಮಾಜ, ದೇಶ ಅಥವಾ ಜಗತ್ತಿನ ಒಳಿತಿಗಾಗಿ ಅಥವಾ ಅಭಿವೃದ್ಧಿಗಾಗಿ ಶ್ರಮಿಸುವ, ತಮ್ಮ ವಯಕ್ತಿಕ ಆಸೆ ಆಕಾಂಕ್ಷೆಗಳನ್ನು ಪರಿತ್ಯಾಗ ಮಾಡಿ ಸಮಾಜದ ಅಭಿವೃದ್ಧಿಗಾಗಿ, ಸಮಾನತೆಗಾಗಿ ಹೋರಾಡಿರುವ ಮಹಾತ್ಯಾಗಿಗಳು ಇತಿಹಾಸ ಪುಟಗಳಲ್ಲಿ ಸೇರಿರುತ್ತಾರೆ. ಭೂಮಿ, ಸೂರ್ಯ, ಚಂದ್ರ ಇರುವವರೆಗೂ ಶಶ್ವತವಾಗಿ ಅವರ ಹೆಸರುಗಳು ಎಲ್ಲರ ಅಂತರಾಳದಲ್ಲಿ ಉಳಿದಿರುತ್ತದೆ. ಮನುಷ್ಯ ಹುಟ್ಟಿದ ಮೇಲೆ ತನ್ನ ಜೀವನವನ್ನು ಸಾರ್ಥಕತೆ ಮಾಡಿಕೊಳ್ಳಬೇಕು. ದೇಶಕ್ಕಾಗಿ, ಸಮಾಜಕ್ಕಾಗಿ ದುಡಿದು ನಾನು ಬೆಳೆದು ಇತರರನ್ನು ಬೆಳೆಸುವ ಮನಸ್ಸು ಮಾಡಬೇಕು. ಎಲ್ಲರಲ್ಲೊಬ್ಬರಾಗಬೇಕು, ಏಕಾಂಗಿಯಾದ ಜೀವನ ನಿರರ್ಥಕ, ಶ್ರೇಷ್ಠ ಸಂಕಲ್ಪವನ್ನು ಹೊಂದಿವವರು ಶ್ರೇಷ್ಠರೆನಿಸುತ್ತಾರೆ. ಇತರ ಪ್ರಾಣಿಗಳು ತನ್ನ ಸಮುದಾಯದ ಉಳಿವಿಗಾಗಿ ತ್ಯಾಗವನ್ನಾದರೂ ಮಾಡಿ ಅವುಗಳನ್ನು ಉಳಿಸುತ್ತವೆ, ಆದರೆ ಮನುಷ್ಯರಾದವರಿಗೆ ಜ್ಞಾನವಿದೆ. ನಾವು ಪ್ರಾಣಿಗಳಿಗಿಂತ ವಿಭಿನ್ನವಾಗಿದ್ದೇವೆ ಎಂಬುದನ್ನು ಸಾಬೀತು ಪಡಿಸಬೇಕು. ಅಳುತ್ತಿರುವಾಗ ಕಣ್ಣೀರು ಒರೆಸಲು ಬಾರದು ಈ ಲೋಕ ನೀನು ಸತ್ತಾಗ ಮಣ್ಣು ಹಾಕುವುದಕ್ಕೆ ಬರುತ್ತೇ ಎಂಬುದೇ ಸತ್ಯ. ಹಗಲಿರುಳು ತಂದೆ ತಾಯಿಗಳು ಕಷ್ಟ ಪಟ್ಟು ದುಡಿಯುವುದೇ ಒಂದೇ ಕಾರಣಕ್ಕೆ ನಮ್ಮ ಕಷ್ಟ ನಮ್ಮ ಮಕ್ಕಳಿಗೆ ಬರಬಾರದೆಂದು ಇಂತಹ ತ್ಯಾಗ ಭಾವನೆ ಹೃದಯಗಳನ್ನು ಇಂದಿನ ಯುವಸಮೂಹ ಅರಿಯಬೇಕಾಗಿದೆ.” ಸಾಧನೆ, ತ್ಯಾಗವಿಲ್ಲದೆ ಸತ್ತರೆ ಸಾವಿಗೆ ಅವಮಾನ ಆದರ್ಶ ವಿಲ್ಲದೆ ಬದುಕಿದರೆ ಬದುಕಿಗೆ ಅವಮಾನ, ಮಾನವನ ಬದುಕು ಶ್ರೇಷ್ಠವಾದುದು. ಜನ್ಮಕೊಟ್ಟಭೂಮಿತಾಯಿಗೆ ಏನನ್ನಾದರೂ ಧಾರೆಯೆರೆಯಬೇಕಾಗಿದೆ. ಸ್ವಾರ್ಥದ ಬದುಕಿಗಿಂತ ತ್ಯಾಗದ ಬದುಕು ಅತಿಶ್ರೇಷ್ಠವಾದುದು ಎಂಬುದನ್ನು ನಾವು ಅರಿಯಬೇಕಾಗಿದೆ. ತ್ಯಾಗದಿಂದ ಸಿಗುವ ಆನಂದ, ಸಂತೋಷ, ಮಾನಸಿಕತೃಪ್ತಿ, ಜಿವನದಸಾರ್ಥಕತೆ, ಬೇರೆಯಾವುದರಿಂದಲೂ ಸಿಗುವುದಿಲ್ಲ. ತ್ಯಾಗದ ಮನಃಸ್ಥಿತಿ ಸಮಾಜದಲ್ಲಿ ಉಳ್ಳವರಿಗಿಂತ ಮದ್ಯಮ ಹಾಗೂ ಬಡವರಲ್ಲಿ ಹೆಚ್ಚಾಗಿ ಕಾಣಬಹುದು, ಉಳ್ಳವರು ಗಳಿಸುವ ಬಾವನೆ, ಬಡವರದು ತ್ಯಾಗದ ಗುಣ, ಹಸಿದವರ ನೋವು ಅದನ್ನು ಅನುಭವಿಸಿದವರಿಗೆ ಮಾತ್ರ ಅರ್ಥವಾಗುತ್ತದೆ. ಇಂತಹವರು ಹೆಚ್ಚು ಆರೋಗ್ಯವಂತರಾಗಿ, ಆನಂದದಿAದ, ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳುತ್ತಾರೆ, ಈ ದೇಶದ ಸಂಸ್ಕೃತಿ ಹಂಚಿತಿನ್ನುವ, ದಾಸೋಹದ ಪಾಲನೆಯಾಗಿದೆ. ಉಳ್ಳವರು ಇಲ್ಲದವರಿಗೆ ಮನಸಾರೆ ನೀಡುವ ಮನೋಭಾವನೆ ಬೆಳೆಯಬೇಕು, ಅನ್ನದಾನ ಮಾಡಿದ ಮನೆ ಚಂದ ಆದ್ದರಿಂದ ಕೊಡುವ ಗುಣ ನಮ್ಮದಾಗಬೇಕು. ಪ್ರಾಣಿಗಳಿಗಿರುವ ತ್ಯಾಗದ ಮನೋಭಾವನೆ ಮನುಷ್ಯನಿಗಿಲ್ಲ ಎಂಬ ಆತಂಕ ಎಲ್ಲಾ ಕಡೆ ಕಾಡುತ್ತಿದೆ. ಈ ಆತಂಕವನ್ನು ಹೋಗಲಾಡಿಸಲು ನಮ್ಮ ದುಡಿಮೆಯ ಒಂದು ಭಾಗವನ್ನು ಸಮಾಜಕ್ಕಾಗಿ ನೀಡಿ ತ್ಯಾಗದ ಗುಣವನ್ನು ಮೆರೆಯಬೇಕಾಗಿದೆ.
- Advertisement -
ಪ್ರೊ. ಸಿ. ಶಿವರಾಜು
ಅಧ್ಯಕ್ಷರು, ಸಂಸ್ಕೃತ ವಿಭಾಗ,
ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು-56.

