*ವರದಿ:ಕುದಾನ್ ಸಾಬ್*
*ಸತ್ಯಕಾಮ ವಾರ್ತೆ ಯಾದಗಿರಿ:*
ನಗರ, ಗ್ರಾಮ ಮನೆ ಬೆಳಗಬೇಕಾದ ಜೆಸ್ಕಾಂ ವಿದ್ಯುತ್ ಶಕ್ತಿ ಪೂರೈಸುವ ಕಂಬಗಳು, ಟಿಸಿಗಳು ಜೀವ ತೆಗೆಯುವ ರಕ್ಕಸ ಶಕ್ತಿಯಾಗಿ ಬಾಯಿ ತೆರೆದು ನಿಂತಿರುವ ಅಪಾಯಕಾರಿ ಜಿಲ್ಲೆಯ ಶಹಾಪುರ ನಗರದ ತುಂಬ ಎಲ್ಲೆಂದರಲ್ಲಿ ಕಣ್ಣಿಗೆ ರಾಚುತ್ತಿವೆ.
ವಿಶೇಷವೆಂದರೆ ಜಿಲ್ಲಾ ಉಸ್ತುವಾರಿ ಸಚಿವರ ಮತಕ್ಷೇತ್ರವಾದ ಶಹಾಪೂರ ತಾಲೂಕಿನಲ್ಲಿ ಮತ್ತು ವಿಶೇಷವಾಗಿ ಶಹಾಪುರ ನಗರದಲ್ಲಿ ವಿದ್ಯುತ್ ಕಂಬಗಳು, ವಿದ್ಯುತ್ ಪರಿವರ್ತಕಗಳ ಕಂಬಗಳು ಅಳವಡಿಸಿರುವ ರೀತಿ ಸ್ಥಿತಿ ನೋಡಿದರೆ ಇವು ವಿದ್ಯುತ್ ಶಕ್ತಿ ನೀಡುವ ಕಂಬಗಳೋ ಅಥವಾ ಶಕ್ತಿ ಕಿತ್ತು ಸಾವು ದಯಪಾಲಿಸುವ ಯಮಕಂಭಗಳೋ ಎಂಬ ಅನುಮಾನ ಬರದೇ ಇರದು.
ವಿದ್ಯುಚ್ಛಕ್ತಿಯು ನಮ್ಮ ಜೀವನದ ಅತ್ಯಂತ ಅವಿಭಾಜ್ಯ ಅಂಗವಾಗಿದೆ, ವಿದ್ಯುತ್ ಮೇಲೆಯೇ ಇಂದು ಸಂಪೂರ್ಣವಾಗಿ ಅವಲಂಬಿಸಿದ್ದೆವೆ.ಪ್ರತಿದಿನ ಸಾವಿರಾರು ಕಾರ್ಯಗಳಿಗೆ ನಮಗೆ ಇದು ಬೇಕಾಗುತ್ತದೆ. ಆದರೆ ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ವಿದ್ಯುತ್ ಅತ್ಯಂತ ಅಪಾಯಕಾರಿ ಎಂಬುದಕ್ಕೆ ಇತ್ತೀಚಿಗೆ ಬೆಂಗಳೂರಿನ ಕಾಡು ಗೋಡಿಯಲ್ಲಿ ಸಂಭವಿಸಿದ ತಾಯಿ-ಮಗು ದುರಂತ ಸಾವು ಜ್ವಲಂತ ಸಾಕ್ಷಿ. ಅಂತಹ ಘಟನೆಗಳು ಶಹಾಪುರದಲ್ಲೂ ಸಂಭವಿಸುವ ಸಾಧ್ಯತೆಯ ಪ್ರಮಾಣ ಅತಿ ಗರಿಷ್ಟ ಮಟ್ಟದಲ್ಲಿದೆ.
- Advertisement -
ಹೌದು ಶಹಾಪುರದಲ್ಲಿ ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲಿ ನಿಮಗೆ ಅಪಾಯಕಾರಿ ಸ್ಥಿತಿಯಲ್ಲಿ ತೀರ ರಸ್ತೆಗೆ ಹೊಂದಿಕೊಂಡು ಇರುವ ವಿದ್ಯುತ್ ಕಂಬಗಳು, ಟಿಸಿಗಳ ಕಂಬಗಳು ಕೈಗೆಟುಕುವ ಅಂತರದಲ್ಲಿ ತಂತಿಗಳನ್ನು ಜೋತು ಬೀಳಿಸಿಕೊಂಡು ಬಲಿಗೆ ಬಾಯಿ ತೆರೆದು ನಿಂತ ರಕ್ಕಸನ ನೋಡಿದಂತಾಗುತ್ತದೆ.
ಉದಾಹರಣೆಗೆ ನಗರದ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಇಂತಹ ಅಪಾಯಕಾರಿ ವಿದ್ಯುತ್ ಕಂಬದ ಕೆಳಗೆ ವ್ಯಾಪಾರ ಮಾಡುತ್ತಿದ್ದಾರೆ ಒಂದು ವೇಳೆ ಅಚಾನಕ್ಕಾಗಿ ಅಲ್ಲಿನ ವಿದ್ಯುತ್ ಕಂಬದಲ್ಲಿನ ಕೇಬಲ್ ಅವರ ಮೇಲೆ ಬಿದ್ದರೆ ಅಲ್ಲೊಂದು ಬೆಂಗಳೂರಿನ ತಾಯಿ ಮಗುವಿನ ಘಟನೆ ನಡೆಯುವ ಸಾಧ್ಯತೆ ಪ್ರಮಾಣ ಮಾತ್ರ ಶೇ. 90ಕ್ಕೂ ಹೆಚ್ಚು ಎಂದು ಹೇಳಬೇಕು.
ಅತ್ತ ನಗರಸಭೆ ಎದುರು ಇರುವ ಆಟೋ ಸ್ಟ್ಯಾಂಡ್ ನ ಬಳಿ ಕೂಡ ವಿದ್ಯುತ್ ಕಂಬಕ್ಕೆ ಯಾವುದೇ ಸುರಕ್ಷತೆ ಇಲ್ಲ, ಅಲ್ಲದೆ ಲಕ್ಷ್ಮಿನಗರ, ಕನ್ಯಕೂಳೂರ ಅಗಸಿ ಸೇರಿದಂತೆ ಪ್ರಮುಖ ಕಡೆ ವಿದ್ಯುತ್ ಕಂಬಕ್ಕೆ ತಂತಿಬೆಲಿ ಕೂಡ ಹಾಕಿಲ್ಲ,
ಕೇಬಲ್ ಗೊಂಚಲು:
ವಿದ್ಯುತ್ ಕಂಬಗಳಲ್ಲಿ ಇತರ ಕೇಬಲ್‌ಗಳು ರಾಶಿ ಇವೆ. ಬಹುತೇಕ ಕಂಬಗಳಲ್ಲಿ ವಿದ್ಯುತ್ ತಂತಿಗಳ ನಡುವೆಯೇ ನೆಟ್‌ವರ್ಕ್ ಇನ್ನಿತರ ಕೇಬಲ್‌ಗಳನ್ನು ಅಳವಡಿಸಲಾಗಿದೆ. ಹಲವು ಕಂಬಗಳಲ್ಲಿ ಕೇಬಲ್ ಸುರಳಿ ಸುತ್ತಿ ಕೈಗೆಟಕುವಂತೆ ಕಟ್ಟಲಾಗಿದೆ. ಅನೇಕ ಕಡೆಗಳಲ್ಲಿ ಕೇಬಲ್ ತುಂಡಾಗಿ ಫುಟ್‌ಪಾತ್ ಹಾಗೂ ರಸ್ತೆಯಲ್ಲಿ ಬಿದ್ದಿವೆ. ವಿದ್ಯುತ್ ತಂತಿಗೆ ಸ್ಕಿನ್ ಆಗಿರುವ ಕೇಬಲ್ ತಾಕಿದರೆ ವಿದ್ಯುತ್ ಪ್ರವಹಿಸುವ ಸಾಧ್ಯತೆ ಇರುತ್ತದೆ. ಯಾವುದೋ ಕೇಬಲ್ ಎಂದು ತುಳಿದವರ ಪ್ರಾಣಕ್ಕೆ ಯರವಾಗುವುದು ಶತಸಿದ್ಧ.
ಈ ರೀತಿಯ ಕೇಬಲ್‌ಗಳನ್ನು ಅಪಾಯಕಾರಿ ಕಂಬಗಳನ್ನು ತೆರವುಗೊಳಿಸಲು ಇಲ್ಲವೇ ಸೂಕ್ತ ಪ್ರತಿಬಂಧಕೋಪಾಯ ಕೈಗೊಳ್ಳಬೇಕಾದ ಇಲಾಖೆ ಕುಂಭಕರ್ಣ ನಿದ್ದೆಗೆ ಜಾರಿದೆ.
- Advertisement -
ಇನ್ನು ಹಲವಾರು ಕಡೆ ಫುಟ್‌ಪಾತ್‌ನಲ್ಲೇ ಬೃಹತ್ ಗಾತ್ರದ ವಿದ್ಯುತ್ ಉಪಕರಣ ಅಳವಡಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಅವುಗಳ ಸುತ್ತ ತಂತಿ ಬೇಲಿ ಮಾದರಿಯನ್ನು ಅಳವಡಿಸಿಲ್ಲ. ಟ್ರಾನ್ಸ್ಫಾರ್ಮ್ರಗಳು ಕೆಲವೆಡೆ ಕೈಗೆಟುಕುವಷು ತಳಮಟ್ಟದಲ್ಲಿವೆ. ಇವುಗಳಿಂದಲೂ ಅಪಾಯ ಸಂಭವಿಸುವ ಸಾಧ್ಯತೆ ತೀರ ಹೆಚ್ಚು.
ವಿದ್ಯುತ್ ಸುರಕ್ಷತೆಯ ಅಗತ್ಯತೆ ಅನಿವಾರ್ಯತೆಯನ್ನ ಅಧಿಕಾರಿಗಳು ಮನಗಾಣಬೇಕಿದೆ. ಆದರೆ ಅವರಿಗೆ ಬಡಿದೆಬ್ಬಿಸಲು ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ದರ್ಶನಾಪೂರ ಅವರ ಸ್ವಮತಕ್ಷೇತ್ರದ ವಾಸ್ತವದ ಕಡೆ ಗಮನಹರಿಸಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕಿದೆ ಇಲ್ಲದಿದ್ದಲ್ಲಿ ಮುಂದೆ ಸಂಭವಿಸುವ ಅನಾಹುತಗಳಿಗೆ ಎಲ್ಲರೂ ಹೊಣೆಗಾರರಾಗಬೇಕಾಗುತ್ತದೆ ಎಂಬುದು ಪತ್ರಿಕೆ ಕಳಕಳಿಯಾಗಿದೆ. ಯಾವ ಕ್ರಮ ಕೈಗೊಳ್ಳುವೋರು ಕಾದು ನೋಡಬೇಕಿದೆ.

