ಸತ್ಯಕಾಮ ವಾರ್ತೆ ಯಾದಗಿರಿ:
ಮುದ್ರಣ ಮಾಧ್ಯಮದ ಮೇಲೆ ಜನರ ಮೇಲೆ ಅಪಾರವಾದ ವಿಶ್ವಾಸವಿದೆ. ಹೀಗಾಗಿಯೇ ಸಾಮಾಜಿಕ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಮತ್ತು ವಾರ್ಷಿಕ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಯಾವುದೇ ವಿಷಯವನ್ನು ಜನರಿಗೆ ತಿಳಿಸುವ ಮುನ್ನ ಸತ್ಯಾಸತ್ಯತೆ ಅರಿಯಬೇಕು. ನಿಖರವಾದ ಮಾಹಿತಿಯ ತಿಳಿಸಬೇಕು. ತಪ್ಪಾಗಿ ನೀಡಿದರೇ ಸಮಾಜದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ. ಇದಕ್ಕೆ ಎಂದಿಗೂ ಅವಕಾಶ ಮಾಡಿಕೊಡಬಾರದು ಎಂದು ತಿಳಿಸಿದರು.
ನಂತರ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಮಾತನಾಡಿ ಎಲ್ಲಿಯೂ ನ್ಯಾಯ ಸಿಗದಿದ್ದಾಗ ಮಾಧ್ಯಮಗಳ ಮುಂದೆ ಹೋದರೇ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಜನರ ಮೇಲಿದೆ. ಹೀಗಾಗಿಯೇ ಪತ್ರಕರ್ತರು ಸತ್ಯವನ್ನು ಜನತೆಗೆ ತಿಳಿಸುವಂತಹ ಕೆಲಸ ಮಾಡಲು ಮುಂದಾಗುವುದು ತುಂಬ ಅಗತ್ಯವಿದೆ ಎಂದು ಹೇಳಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಕೆ. ನಿಂಗಜ್ಜ ಮಾತನಾಡಿ; ರಾಜ್ಯ ಸರಕಾರ ಆಂಧ್ರ ಮಾದರಿಯಲ್ಲಿ ಪತ್ರಕರ್ತರಿಗೆ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಬೇಕಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ಪತ್ರಕರ್ತರಿಗೆ ನಿವೇಶನಗಳನ್ನು ನೀಡಲು ರಾಜ್ಯ ಸರಕಾರ ಮುಂದಾಗಬೇಕು ಎಂದು ತಿಳಿಸಿದರು.
- Advertisement -
ರಾಜ್ಯ ಸರಕಾರ ಶೀಘ್ರದಲ್ಲಿಯೇ ಗ್ರಾಮೀಣ ಪ್ರತಕರ್ತರಿಗೆ ಬಸ್ ಪಾಸ್‌ಗಳನ್ನು ವಿತರಣೆ ಮಾಡಲಿದೆ. ಇದರ ಸೌಲಭ್ಯವನ್ನು ಎಲ್ಲರೂ ಪಡೆದುಕೊಳ್ಳುವುದು ತುಂಬ ಅಗತ್ಯವಿದೆ ಎಂದು ತಿಳಿಸಿದರು.
ಖ್ಯಾತ ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಮಾತನಾಡಿ; ಪತ್ರಿಕೋದ್ಯಮದಲ್ಲಿ ನೈಜ ಪತ್ರಕರ್ತರ ಸಂಖ್ಯೆ ಕಡಿಮೆ ಆಗುತ್ತಿರುವುದು ನಿಜಕ್ಕೂ ಕಳವಳಕಾರಿ ಸಂಗತಿಯಾಗಿದೆ. ಇದಲ್ಲದೇ ಯಾವುದೇ ಸುದ್ದಿ ಬರೆಯುವ ಮುನ್ನ ಅದರ ಅಧ್ಯಯನ ಮಾಡಬೇಕು ಎಂದರು.
ಡಿಡಿಯು ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ. ಭೀಮಣ್ಣ ಮೇಟಿ ಮಾತನಾಡಿ; ಸ್ಪರ್ಧಾತ್ಮ ಜಗತ್ತಿನಲ್ಲಿ ಸಾಕಷ್ಟು ಮಾಧ್ಯಮಗಳು ಹೊಸದಾಗಿ ಬರುತ್ತಿವೆ. ಅದರಲ್ಲಿಯೂ ದೃಶ್ಯ ಮಾಧ್ಯಮಗಳಿಗಿಂತಲೂ ಮುದ್ರಣ ಮಾಧ್ಯಮ ಮೇಲೆ ಸಾಕಷ್ಟು ವಿಶ್ವಾಸವಿದೆ. ಇದನ್ನು ಉಳಿಸಿಕೊಂಡು ಹೋಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸುಲೈಮಾನ್ ನದಾಫ್ ಸೇರಿದಂತೆ ಇನ್ನಿತರರು ಇದ್ದರು.

