ಯಾದಗಿರಿ: ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟದ ವಿರುದ್ಧ ಪೊಲೀಸ್ ಇಲಾಖೆ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ಗ್ರಾಮ ಹಾಗೂ ತಾಂಡಾಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಆದರೆ, ಅಕ್ರಮ ಮದ್ಯದ ಮೂಲ ಪೂರೈಕೆ ಜಾಲವನ್ನು ಪತ್ತೆಹಚ್ಚಿ ಕಡಿವಾಣ ಹಾಕುವಲ್ಲಿ ಅಬಕಾರಿ ಇಲಾಖೆಯ ಪಾತ್ರವೇನು? ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಬಂದಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದರೆ, ಅದರ ಹಿಂದೆ ನಿರಂತರ ಪೂರೈಕೆ ವ್ಯವಸ್ಥೆ ಇರುವ ಸಾಧ್ಯತೆಯಿದೆ. ಮದ್ಯ ಎಲ್ಲಿಂದ ಬರುತ್ತಿದೆ, ಯಾರು ಪೂರೈಸುತ್ತಿದ್ದಾರೆ, ಯಾವ ಮಾರ್ಗದಲ್ಲಿ ಗ್ರಾಮಗಳಿಗೆ ತಲುಪುತ್ತಿದೆ ಹಾಗೂ ಸಾಗಣೆಗೆ ಯಾವ ವಾಹನಗಳನ್ನು ಬಳಸಲಾಗುತ್ತಿದೆ ಎಂಬುದನ್ನು ಪತ್ತೆಹಚ್ಚುವುದು ಅಗತ್ಯವಾಗಿದೆ.
ಕೇವಲ ಮದ್ಯ ಮಾರಾಟಗಾರರನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸುವುದರಿಂದ ಅಕ್ರಮ ಮದ್ಯದ ಜಾಲ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವುದು ಕಷ್ಟ. ಮಾರಾಟಗಾರನಿಗೆ ಮದ್ಯ ಪೂರೈಸುವ ವ್ಯಕ್ತಿ, ಮಧ್ಯವರ್ತಿ ಹಾಗೂ ಸಾಗಣೆದಾರರ ತನಕ ತನಿಖೆ ವಿಸ್ತರಿಸಿದಾಗ ಮಾತ್ರ ಜಾಲದ ಮೂಲವನ್ನು ಪತ್ತೆಹಚ್ಚಲು ಸಾಧ್ಯ.
ಪೊಲೀಸರ ದಾಳಿ; ಅಬಕಾರಿ ಇಲಾಖೆಯ ಕಾರ್ಯಾಚರಣೆ ಎಲ್ಲಿದೆ?
ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಪೊಲೀಸರು ಅಕ್ರಮ ಮದ್ಯದ ವಿರುದ್ಧ ದಾಳಿ ನಡೆಸಿ ಮದ್ಯ ಜಪ್ತಿ ಮಾಡುತ್ತಿರುವುದು ಗೋಚರಿಸುತ್ತಿದೆ. ಆದರೆ ಅಬಕಾರಿ ಇಲಾಖೆಯಿಂದ ಸ್ವತಂತ್ರವಾಗಿ ನಡೆಯುತ್ತಿರುವ ದಾಳಿಗಳು, ಪೂರೈಕೆದಾರರ ವಿರುದ್ಧದ ಕ್ರಮ ಹಾಗೂ ಅಕ್ರಮ ಸಾಗಣೆ ತಡೆಗೆ ಕೈಗೊಂಡಿರುವ ಕ್ರಮಗಳ ಕುರಿತು ಹೆಚ್ಚಿನ ಮಾಹಿತಿ ಸಾರ್ವಜನಿಕ ವಲಯಕ್ಕೆ ಲಭ್ಯವಾಗಬೇಕಿದೆ.
ಅಕ್ರಮ ಮದ್ಯ ಪತ್ತೆಯಾದ ಪ್ರಕರಣಗಳಲ್ಲಿ ಮದ್ಯದ ಮೂಲ ಯಾವುದು? ಪೂರೈಕೆದಾರ ಯಾರು? ಸಾಗಣೆ ಹೇಗೆ ನಡೆಯಿತು? ಎಂಬ ಪ್ರಶ್ನೆಗಳಿಗೂ ತನಿಖೆಯಲ್ಲಿ ಉತ್ತರ ಸಿಗಬೇಕಿದೆ.
ಅಕ್ರಮ ಮದ್ಯ ಜಪ್ತಿ ಮಾಡಿ ಮಾರಾಟಗಾರರ ವಿರುದ್ಧ ಪ್ರಕರಣ ದಾಖಲಿಸುವುದರ ಜತೆಗೆ ಪೂರೈಕೆದಾರರು, ಮಧ್ಯವರ್ತಿಗಳು ಹಾಗೂ ಸಾಗಣೆ ಜಾಲದ ವಿರುದ್ಧವೂ ಕಾನೂನು ಕ್ರಮ ಅಗತ್ಯ. ಒಬ್ಬ ಮಾರಾಟಗಾರ ಸಿಕ್ಕಿಬಿದ್ದರೂ ಅದೇ ಮೂಲದಿಂದ ಮತ್ತೊಬ್ಬರಿಗೆ ಮದ್ಯ ಪೂರೈಕೆಯಾಗುತ್ತಿದ್ದರೆ, ಅಕ್ರಮ ಜಾಲಕ್ಕೆ ಸಂಪೂರ್ಣ ಕಡಿವಾಣ ಬಿದ್ದಂತಾಗುವುದಿಲ್ಲ.
ಹೀಗಾಗಿ ಅಕ್ರಮ ಮದ್ಯದ ವಿರುದ್ಧದ ಕಾರ್ಯಾಚರಣೆಯಲ್ಲಿ ಪ್ರಕರಣಗಳ ಸಂಖ್ಯೆಯಷ್ಟೇ ಅಲ್ಲ, ಪೂರೈಕೆ ಜಾಲದ ಮೂಲವನ್ನು ಎಷ್ಟು ಮಟ್ಟಿಗೆ ಪತ್ತೆಹಚ್ಚಲಾಗಿದೆ ಎಂಬುದೂ ಮುಖ್ಯ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಅಬಕಾರಿ ಸಿಬ್ಬಂದಿಯದ್ದೇ ವಾಹನಗಳೇ?
ಯಾದಗಿರಿ ಜಿಲ್ಲೆಯ ಕೆಲವು ಹಳ್ಳಿಗಳು ಹಾಗೂ ತಾಂಡಾಗಳಿಗೆ ಹಗಲು-ರಾತ್ರಿ ಅಕ್ರಮವಾಗಿ ಮದ್ಯ ಸಾಗಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ನಗರದ ಕೆಲವು ಬಾರ್ ಹಾಗೂ ವೈನ್‌ಶಾಪ್‌ಗಳಿಂದ ಗೂಡ್ಸ್ ವಾಹನಗಳು ಮತ್ತು ಕಾರುಗಳ ಮೂಲಕ ಗ್ರಾಮೀಣ ಪ್ರದೇಶಗಳಿಗೆ ಮದ್ಯ ಸಾಗಿಸಲಾಗುತ್ತಿದೆ ಎನ್ನಲಾಗುತ್ತಿದೆ.
ಇಂತಹ ಸಾಗಣೆಗೆ ಬಳಕೆಯಾಗುತ್ತಿವೆ ಎನ್ನಲಾದ ಕೆಲವು ವಾಹನಗಳು ಅಬಕಾರಿ ಅಧಿಕಾರಿಗಳು ಅಥವಾ ಸಿಬ್ಬಂದಿಗೆ ಸಂಬಂಧಿಸಿದವು ಎಂಬ ಆರೋಪವೂ ಸ್ಥಳೀಯವಾಗಿ ಕೇಳಿಬರುತ್ತಿದೆ.
ಮದ್ಯದ ಮೂಲ ಪತ್ತೆಯಲ್ಲಿ ಇಲಾಖೆ ವಿಫಲವೇ?
ಗ್ರಾಮ ಹಾಗೂ ತಾಂಡಾಗಳಲ್ಲಿ ಅಕ್ರಮ ಮದ್ಯ ಮಾರಾಟದ ದೂರುಗಳು ನಿರಂತರವಾಗಿ ಕೇಳಿಬರುತ್ತಿದ್ದರೂ, ಅದರ ಮೂಲ ಪತ್ತೆಹಚ್ಚುವಲ್ಲಿ ಅಬಕಾರಿ ಇಲಾಖೆಯ ಕಾರ್ಯಾಚರಣೆ ಏಕೆ ಗೋಚರಿಸುತ್ತಿಲ್ಲ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಪೊಲೀಸರು ಮಾರಾಟಗಾರರನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸುತ್ತಿರುವಾಗ, ಮದ್ಯ ಪೂರೈಸುವವರ ವಿರುದ್ಧ ಎಷ್ಟು ಪ್ರಕರಣ ದಾಖಲಾಗಿವೆ? ನಗರ ಪ್ರದೇಶಗಳಿಂದ ಗ್ರಾಮಗಳಿಗೆ ಅಕ್ರಮವಾಗಿ ಸಾಗಣೆ ನಡೆಯುತ್ತಿದೆ ಎಂಬ ಆರೋಪಗಳಿದ್ದರೆ, ಸಾಗಣೆ ಮಾರ್ಗ, ವಾಹನ ಹಾಗೂ ಪೂರೈಕೆದಾರರ ಮಾಹಿತಿ ಇಲಾಖೆಗೆ ಇಲ್ಲವೇ? ಮಾಹಿತಿ ಇದ್ದರೆ ಕ್ರಮ ಏಕೆ ಕಾಣುತ್ತಿಲ್ಲ? ಎಂಬ ಪ್ರಶ್ನೆಗಳಿಗೆ ಇಲಾಖೆ ಉತ್ತರಿಸಬೇಕಿದೆ.