ಯಾದಗಿರಿ : ಹತ್ತು ದಿನಗಳ ನವರಾತ್ರಿ ಉತ್ಸವಕ್ಕೆ ಇಲ್ಲಿಗೆ ಸಮೀಪದ ಅನುಗ್ರಹ ಕ್ಷೇತ್ರ ಅಬ್ಬೆತುಮಕೂರಿನ ವಿಶ್ವಾರಾಧ್ಯ ಮಠ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ ಎಂದು ಮಠದ ಮಾಧ್ಯಮ ವಕ್ತಾರ ಡಾ.ಸುಭಾಷಚಂದ್ರ ಕೌಲಗಿ ಅವರು ತಿಳಿಸಿದ್ದಾರೆ.
ಅ.11ರಿಂದ 21 ರವರೆಗೆ ಪೀಠಾಧಿಪತಿ ಪರಮಪೂಜ್ಯ ಡಾ.ಗಂಗಾಧರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಮಠದ ಸಂಪೂರ್ಣ ಪ್ರಾಂಗಣ ಮತ್ತು ಅಷ್ಠಸಿದ್ದಿ ಕಟ್ಟೆ, ಎದುರಿನ ಜಾಗ ಎಲ್ಲವೂ ದೀಪಾಂಲಕಾರ, ಹಸಿರು ತೋರಣ, ಬೃಹತ್ ವೇದಿಕೆ ಹೂಗಳಿಂದ ಅಲಂಕೃತಗೊಳಿಸಲಾಗಿದೆ. ಮಠದ ಸುತ್ತಲು ಮತ್ತು ಮುಖ್ಯ ದ್ವಾರದಲ್ಲಿ ಭಕ್ತರನ್ನು ಸ್ವಾಗತಿಸುವ ಕಮಾನುಗಳು, ಬ್ಯಾನರ್ ಗಳು ರಾರಾಜಿಸುತ್ತಿವೆ. ಬರುವ ಭಕ್ತರ ಪ್ರಸಾದ ವ್ಯವಸ್ಥೆಗಾಗಿ ಬಾಣಸಿಗರು ಅಡುಗೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ಪ್ರತಿವರ್ಷದಂತೆಯೇ ಈ ವರ್ಷವೂ ದಸರಾ ಹಬ್ಬದ ಅಂಗವಾಗಿ ಜಗನ್ಮಾತೆ ಭಘಳಾಂಬದೇವಿ ನವರಾತ್ರಿ ಪೂಜೆ, ಪಾರಾಯಣ, ಪುರಾಣ ಮತ್ತು ಮಹತ್ವದ ಪಂಚ ಮಂಗಳಾರುತಿ ಮತ್ತು ಉಡಿ ತುಂಬುವ ಕಾರ್ಯಕ್ರಮಗಳಿಗಾಗಿ ಎಲ್ಲ ಸಿದ್ಧತೆ ಪೂರ್ಣಗೊಂಡಿದೆ ಎಂದು ಅವರು ಹೇಳಿದ್ದಾರೆ. ಪ್ರ ತಿನಿತ್ಯ ಬೆಳಗ್ಗೆ ವಿಶ್ವಾರಾಧ್ಯರ ಗದ್ದುಗೆಗೆ ವಿಶೇಷ ಅಭಿಷೇಕ, ನಡೆದು ನಂತರ 10.30ರಿಂದ ಮಧ್ಯಾಹ್ನ 12.30ರವರೆಗೆ ಮಠದ ಆವರಣದ ಅಷ್ಟಸಿದ್ದಿಕಟ್ಟೆಯ ಮೇಲಿರುವ ದೇವಿ ಮಂದಿರ ಎದುರಿಗೆ ಈ ಎಲ್ಲ ಕಾರ್ಯಕ್ರಮಗಳು ಜರುಗಲಿವೆ. ದೇವಿ ಪಾರಾಯಣ ಮತ್ತು ಪುರಾಣದ ನಂತರ ಸಂಗೀತ ವೈಭವದೊಂದಿಗೆ ಪೀಠಾಧಿಪತಿ ಡಾ.ಗಂಗಾದರ ಸ್ವಾಮಿಗಳಿಂದ ಪಂಚ ಮಂಗಳಾರುತಿ ಜರುಗುವುದು. ಈ ಎಲ್ಲ ಕಾರ್ಯಕ್ರಮಗಳಲ್ಲಿ ಮಠದ ಕಿರಿಯ ಸ್ವಾಮಿಗಳಾದ ಶಿವಶೇಖರ ವಿಶ್ವಾರಾಧ್ಯ ಸ್ವಾಮಿಗಳು ಉಪಸ್ಥಿತರಿರುವರು. ಪ್ರತಿನಿತ್ಯವು ವಿವಿಧ ಊರುಗಳ ಭಕ್ತರಿಂದ ನಿತ್ಯವೂ ಧಾರ್ಮಿಕ, ಸಾಂಸ್ಕೃತಿಕ, ಜಾನಪದ ಕಾರ್ಯಕ್ರಮಗಳು ನಡೆಯಲಿವೆ.
ಜಗನ್ಮಾತೆ ಭಘಳಾಂಬಿದೇವಿಯನ್ನು ವಿಶ್ವಾರಾಧ್ಯರು ಒಲಿಸಿಕೊಂಡು ಆ ಮೂಲಕ ಅಷ್ಟಸಿದ್ದಿಗಳನ್ನು ಶ್ರೀಮಠದಲ್ಲಿ ಸ್ಥಾಪಿಸಿದ್ದರು. ಕಳೆದ ಮೂರುವರೆ ದಶಕಗಳಿಂದ ಮಠದಲ್ಲಿ ಪ್ರತಿವರ್ಷವೂ ಜಗನ್ಮಾತೆ ಭಘಳಾಂಬಿದೇವಿ ನವರಾತ್ರಿ ಪೂಜೆ, ಪಾರಾಯಣ, ಪುರಾಣ, ಪಂಚ ಮಂಗಳಾರುತಿ ಮತ್ತು ಉಡಿ ತುಂಬುವ ಕಾರ್ಯಕ್ರಮಗಳು ಮಾಡಿಕೊಂಡು ಬರಲಾಗುತ್ತಿದೆ. ಈ ಮೂಲಕ ದೇವಿ ಹಾಗೂ ವಿಶ್ವಾರಾಧ್ಯರ ಅನುಗ್ರಹ ಮಠದ ಭಕ್ತರಿಗೆ ಆಗಲಿ ಎಂಬ ಸದುದ್ದೇಶ ಹೊಂದಲಾಗಿದೆ.
ಡಾ.ಗಂಗಾಧರ ಶಿವಾಚಾರ್ಯ ಸ್ವಾಮಿಗಳು
ಪೀಠಾಧಿಪತಿಗಳು, ಅನುಗ್ರಹ ಕ್ಷೇತ್ರ, ಅಬ್ಬೆತುಮಕೂರು