ಯಾದಗಿರಿ: ತುಳಜಾಪುರಕ್ಕೆ ತೆರಳಿ ಮರಳುವ ಪ್ರಯಾಣದಲ್ಲಿದ್ದ ನಾಲ್ವರು ಯುವಕರ ಬದುಕು ರಾಷ್ಟ್ರೀಯ ಹೆದ್ದಾರಿಯಲ್ಲೇ ದುರಂತ ಅಂತ್ಯ ಕಂಡಿದೆ. ವೇಗವಾಗಿ ಬಂದ ಬ್ರಿಜಾ ಕಾರು ನಿಯಂತ್ರಣ ತಪ್ಪಿ ನಿರ್ಮಾಣ ಹಂತದಲ್ಲಿದ್ದ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಯುವಕರು ಮೃತಪಟ್ಟ ಘಟನೆ ಶಹಾಪುರ ತಾಲ್ಲೂಕಿನ ಇಬ್ರಾಹಿಂಪುರ ಸೀಮಾಂತರದಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದೆ.
ಇಬ್ರಾಹಿಂಪುರ ಗ್ರಾಮದ ಸಮೀಪದ ಡಿಬಿಎಲ್ ಕ್ಯಾಂಪ್ ಬಳಿಯ ಸೂರತ್-ಚೆನ್ನೈ ರಾಷ್ಟ್ರೀಯ ಹೆದ್ದಾರಿಯ ಸಿಕ್ಸ್‌ವೇ ರಸ್ತೆಯಲ್ಲಿ ನ.6ರ ರಾತ್ರಿ 11ರಿಂದ 11.30ರ ನಡುವೆ ಅಪಘಾತ ಸಂಭವಿಸಿದೆ. ಕೆಎ-34 ಎನ್-6622 ನೋಂದಣಿ ಸಂಖ್ಯೆಯ ಬ್ರಿಜಾ ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು. ಕಾರು ನಿರ್ಮಾಣ ಹಂತದಲ್ಲಿದ್ದ ಸೇತುವೆಗೆ ಅಪ್ಪಳಿಸಿದ ರಭಸಕ್ಕೆ ವಾಹನ ಜಖಂಗೊಂಡಿದೆ.
ಕಾರಿನ ಚಾಲಕ ಗುರುರಾಜ್ ಸುರೇಶ ಚವ್ಹಾಣ (29) ಹಾಗೂ ಮುಂಭಾಗದಲ್ಲಿ ಕುಳಿತಿದ್ದ ರೆಡ್ಡಿ ಬಾಮ್ಲಾ ರಾಠೋಡ (33) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಂಬದಿಯ ಸೀಟಿನಲ್ಲಿದ್ದ ಗೋವಿಂದ ಸೀತ್ಯಾ ಚವ್ಹಾಣ (28) ಮತ್ತು ಕುಮಾರ ರಾಮು ರಾಠೋಡ (26) ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಂಬ್ಯುಲೆನ್ಸ್ ಮೂಲಕ ಯಾದಗಿರಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಬೆಳಗಿನ ಜಾವ 1.20ರ ಸುಮಾರಿಗೆ ಮೃತಪಟ್ಟಿದ್ದಾರೆ.
ನಾಲ್ವರೂ ಯಾದಗಿರಿ ತಾಲೂಕಿನ ವಿವಿಧ ತಾಂಡಾಗಳ ನಿವಾಸಿಗಳಾಗಿದ್ದಾರೆ. ನಾಲ್ವರು ಯುವಕರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಅತಿವೇಗವೇ ಅಪಘಾತಕ್ಕೆ ಕಾರಣ?
ಕಾರು ಚಾಲಕ ಗುರುರಾಜ್ ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ನಿರ್ಮಾಣ ಹಂತದ ಸೇತುವೆಗೆ ಡಿಕ್ಕಿ ಹೊಡೆದಿದೆ ಎಂದು ಮೃತ ರೆಡ್ಡಿ ಅವರ ಸಹೋದರ ಮಂಗ್ಯಾ ಬಾಮ್ಲಾ ರಾಠೋಡ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.