ಯಾದಗಿರಿ: ಎನ್ಎ (NA) ಜಮೀನುಗಳನ್ನು ವಾಣಿಜ್ಯ ನಿವೇಶನಗಳಾಗಿ (Commercial Sites) ಪರಿವರ್ತಿಸಿಕೊಡಲು 3 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಇಲ್ಲಿನ ನಗರ ಯೋಜನಾ ಕಚೇರಿಯ ಇಬ್ಬರನ್ನು ರಾಯಚೂರು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಗರ ಯೋಜನಾ ಸದಸ್ಯ ಕಾರ್ಯದರ್ಶಿ ಶರಣಪ್ಪ ಮತ್ತು ಚಾಲಕ ಸಂತೋಷಕುಮಾರ್ ವಶಕ್ಕೆ ಪಡೆದವರು. ಮಾನ್ವಿ ನಿವಾಸಿ ಸುಧಾಕರ್ ನೀಡಿದ ದೂರಿನ ಆಧಾರದಲ್ಲಿ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಎನ್ಎ ಜಮೀನುಗಳನ್ನು ವಾಣಿಜ್ಯ ನಿವೇಶನಗಳಾಗಿ ಪರಿವರ್ತಿಸಿಕೊಡುವ ಕೆಲಸಕ್ಕೆ ಸಂಬಂಧಿಸಿದಂತೆ 3 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ.
ರಾಯಚೂರು ಲೋಕಾಯುಕ್ತ ಪೊಲೀಸ್ ವಿಭಾಗದ ಎಸ್ಪಿ ಸಿದ್ಧರಾಜು ಸಿ. ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಮೇಲ್ವಿಚಾರಣೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ರವಿ ಪುರುಷೋತ್ತಮ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.
ಈ ಸಂಬಂಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.